ರಸ್ತೆಯಲ್ಲಿ ಕೂಗಾಡುವ ಕಾಂಗ್ರೆಸ್ಸಿಗರು ಉಡುಪಿಗೆ ನೀಡಿದ ಕೊಡುಗೆಯನ್ನು ತಿಳಿಸಲಿ; ಕಿರಣ್ ಕುಮಾರ್
ರಸ್ತೆಯಲ್ಲಿ ನಿಂತು ಕೂಗಾಡುವ ಕಾಂಗ್ರೆಸ್ಸಿಗರು ತಮ್ಮ ಸರ್ಕಾರ ಉಡುಪಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಉತ್ತರಿಸಲಿ ಎಂದು ಮಾಜಿ ನಗರಸಭಾ ಸದಸ್ಯ ಕಿರಣ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಜೆಟ್ ನಲ್ಲಿ ಉಡುಪಿಗೆ ಅನುದಾನ ನೀಡುವ ವ್ಯವಧಾನ ಕಾಂಗ್ರೆಸ್‌ಗೆ ಇಲ್ಲ. ಸಿಕ್ಕಿದ್ದಲ್ಲೆಲ್ಲಾ ದೊಡ್ಡ ದೊಡ್ಡ ಮಾತನಾಡುವ ಕಾಂಗ್ರೆಸ್ ನಾಯಕರು ಬಜೆಟ್ ನಲ್ಲಿ ಉಡುಪಿಗೆ ಹಣ ಎಷ್ಟು ಕೊಟ್ಟಿದ್ದೀರಿ ಎನ್ನುವುದನ್ನು ಜನತೆಗೆ ಹೇಳಲಿ ಎಂದರು. ಉಡುಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ನಾಯಕರ ಮಾತು ಕೇಳಿ ಅಲ್ಲಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಾರೆಯೇ ಹೊರತು ಉಡುಪಿ ಜಿಲ್ಲೆಯ ಸಮಸಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ. ರಸ್ತೆಯಲ್ಲಿ ಕೂಗಾಡುವ ಕಾಂಗ್ರೆಸ್ಸಿಗರು ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಉತ್ತರಿಸಲಿ ಎಂದರು.
ನಗರ ಯೋಜನೆ ಎನ್ನುವುದು ಭ್ರಷ್ಟಾಚಾರದ ಕೂಪ ಆಗಿದೆ. ಬಡವನಿಗೆ ಸಿಂಗಲ್ ಲೇ ಔಟ್ ಆಗುವುದಿಲ್ಲ . ಆದರೆ ಶ್ರೀಮಂತರಿಗೆ ಆಗುತ್ತಿದೆ. ಉಡುಪಿ ಜಿಲ್ಲೆಗೆ ಅವಮಾನವಾಗುವ ಕೆಲಸವನ್ನು ಬೇರೆ ಜಿಲ್ಲೆಯಿಂದ ಬಂದ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದ ಅವರು, ಇತ್ತೀಚೆಗೆ ನಡೆದ ತೆರಿಗೆ ವಂಚನೆ ಪ್ರಕರಣದಲ್ಲಿ ನಗರಸಭೆ ಹಾಗೂ ಬ್ಯಾಂಕಿನವರು ಭಾಗಿಯಾಗಿರುವ ಸಾಧ್ಯತೆ ಇದ್ದು ತನಿಖೆ ನಡೆಯಬೇಕು ಎಂದರು. ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಣ ಲೂಟಿಯಾಗಿರುವ ಬಗ್ಗೆ ತನಿಖೆ ನಡೆಸಬೇಕಿತ್ತು. ಆದರೆ ಜಿಲ್ಲಾಧಿಕಾರಿಗಳು ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು.