ಚಮ್ಮಾರಿಕೆಯಲ್ಲೇ ಬದುಕು ಕಟ್ಟಿಕೊಂಡ "ಅಮಾಸೆ"
ಮಾಡುವ ಕೆಲಸ ಯಾವುದೇ ಇರಲಿ ಅದರನ್ನು ನಿಷ್ಠೆ ಪ್ರಾಮಾಣಿಕತೆ ಹಾಗು ಶ್ರದ್ಧೆಯಿಂದ ನಿರ್ವಹಿಸಿದರೆ ಅದರಿಂದ ಸುಂದರ ಬದುಕು ರೂಪಿಸಿಕೊಳ್ಳಬಹುದು. ಇದನ್ನು ಉಡುಪಿಯ ಚಮ್ಮಾರರೊಬ್ಬರು ತೋರಿಸಿಕೊಟ್ಟಿದ್ದಾರೆ. ತಮ್ಮ ತಲೆಮಾರುಗಳಿಂದ ಬಂದ ಈ ಕಲೆಯನ್ನು ಉಳಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಹೆಸರು ಅಮಾಸೆ. ಅಮಾವಾಸ್ಯೆ ದಿನ ಹುಟ್ಟಿರುವುದರಿಂದ ಇವರಿಗೆ ಅಮಾಸೆ ಎಂದು ಹೆಸರಿಟ್ಟಿದ್ದಾರೆ. ಮೂಲತಃ ದಾವಣಗೆರೆ ಮೂಲದವರಾದ ಅಮಾಸೆ ಈಗ ಉಡುಪಿಯಲ್ಲೇ ಮನೆ ಮಾಡಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
50 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದಾರೆ. ಅವಗಿನ್ನೂ ಅಮಾಸೆ ಅವರಿಗೆ 10 ವರ್ಷ. ಕಿತ್ತು ತಿನ್ನುವ ಬಡತನವು ಅಮಾಸೆ ಅವರನ್ನು ಶಾಲಾ ಮೆಟ್ಟಿಲು ಹತ್ತದಂತೆ ಮಾಡಿತು. ತಂದೆ ತಾಯಿಗೆ 16 ಜನ ಮಕ್ಕಳು. ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ಕುಟುಂಬ ಕೆಲಸ ಅರಸಿ ಉಡುಪಿಗೆ ಬಂದಿದೆ. 1970ರಲ್ಲಿ ಕುಟುಂಬಿಕರೊಂದಿಗೆ ಉಡುಪಿಗೆ ಬಂದ ಅಮಾಸೆ 10 ವರ್ಷದವರಿದ್ದಾಗಲೇ ತಮ್ಮ ವೃತ್ತಿ ಬದುಕು ಚಮ್ಮಾರಿಕೆ ಮಾಡತೊಡಗಿದರು. ಅಂದು ಮನೆ ಮನೆಗೆ ತೆರಳಿ ಚಪ್ಪಲಿ ಹೊಲಿದುಕೊಟ್ಟರೆ ನಾಲ್ಕಾಣೇ ಸಿಗುತ್ತಿತ್ತು. ಶೂ ಪಾಲೀಶ್‌ಗೆ ಎಂಟಾಣೆ ಸಿಗುತ್ತಿತ್ತು. ಹೀಗೆ ಮನೆ ಮನೆಗೆ ತೆರಳಿ ಚಪ್ಪಲಿ ಹೊಲಿಯುತ್ತಿದ್ದ ಅಮಾಸೆ ಅವರು ಸಣ್ಣ ಗೂಡಂಗಡಿ ಮಾಡಿ ಚಮ್ಮಾರಿಕೆ ಮಾಡಿಕೊಂಡು ಬಂದರು. ಅಂದು ದಿನದಲ್ಲಿ 15 ರೂಪಾಯಿ ದುಡಿಯುತ್ತಿದ್ದರು.
ಉಡುಪಿಗೆ ಬಂದು 23 ವರ್ಷಗಳ ಕಾಲ ಬಾಡಿಗೆ ಮನೆಯಲ್ಲೇ ವಾಸವಿದ್ದ ಅಮಾಸೆ ಕುಟುಂಬಕ್ಕೆ 1984ರಲ್ಲಿ ನಿಟ್ಟೂರು ಬಳಿ ಸರ್ಕಾರದಿಂದ ಎರಡೂವರೆ ಸೆಂಟ್ಸ್ ಜಾಗ ಮಂಜೂರಾಯಿತು. ನಂತರ ತಮಿಳುನಾಡು ಮೂಲದ ಉಡುಪಿಯಲ್ಲಿ ವಾಸವಿದ್ದ ಚಿನ್ನತಾಯಿ ಎಂಬವರೊಂದಿಗೆ ಮದುವೆಯಾಗುತ್ತಾರೆ. ಈ ದಂಪತಿಗೆ ಈಗ ಮೂರು ಜನ ಮಕ್ಕಳು.ಇಬ್ಬರು ಹೆಣ್ಣುಮಕ್ಕಳು ಓರ್ವ ಪುತ್ರ. ಎಲ್ಲಾ ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಮದುವೆಯೂ ಮಾಡಿಸಿದ್ದಾರೆ. ಗುಡಿಸಲು ಕಟ್ಟಿ ಬದುಕುತ್ತಿದ್ದ ಆ ಜಾಗದಲ್ಲಿ ಈ ಎರಡು ಮಹಡಿಯ ಸುಂದರ ಮನೆ ಕಟ್ಟಿದ್ದಾರೆ ಅಮಾಸೆ ಅವರು. ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟದ್ದೇನೆ. ಕಷ್ಟಪಟ್ಟು ದುಡಿದು ಸಾಲ ತೀರಿಸುತ್ತಿದ್ದೇನೆ ಎನ್ನುತ್ತಾರೆ ಅಮಾಸೆ ಅವರು.
ಸಿದ್ಧಪಡಿಸಿದ ಪಾದರಕ್ಷೆಗಳ ಅಬ್ಬರದಿಂದಾಗಿ ಈಗ ಕೇವಲ ಹರಿದ ಚಪ್ಪಲಿಗಳನ್ನು ಹೊಲಿಯುವ ಅಥವಾ ಸಣ್ಣಪುಟ್ಟ ದುರಸ್ತಿ ಮಾಡುವ ಕೆಲಸಕ್ಕೆ ಈ ವೃತ್ತಿ ಸೀಮಿತವಾಗುತ್ತಿದ್ದು, ಈಗಿನ ಪರಿಸ್ಥಿತಿಗೆ ಚಪ್ಪಲಿ ಹೊಲಿದು ಬದುಕು ಸಾಗಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ಅಮಾಸೆ ಅವರು.
ಕಡು ಬಡತನದ ನಡುವೆಯೂ ಚಮ್ಮಾರಿಕೆ ವೃತ್ತಿ ಮಾಡುತ್ತಾ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ ಅಮಾಸೆ ಅವರ ವೃತ್ತಿ ಬದುಕು ಅದೆಷ್ಟೋ ಕುಟುಂಬಗಳಿಗೆ ಸ್ಫೂರ್ತಿದಾಯಕವಾಗಿದೆ. ಪ್ರಾಮಾಣಿಕ ದುಡಿಮೆಯಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎನ್ನವುದು ಅಮಾಸೆ ಅವರ ಕುಟುಂಬ ಸಾಬೀತುಮಾಡಿದೆ.

