-->
 ಗಾಂಜಾ ಮಾರಾಟ ಪ್ರಕರಣ; ಆರು ಮಂದಿಯ ಬಂಧನ

ಗಾಂಜಾ ಮಾರಾಟ ಪ್ರಕರಣ; ಆರು ಮಂದಿಯ ಬಂಧನ


ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಮಂಗಳೂರಿನ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಮಕ್ಸೂದ್ ಸಾಗ್ (23), ಅಹಮ್ಮದ್ ಅಲಿ ಅರ್ಷಾನ್ (22), ಎಡಲ್ ರೋಚ್ (33), ಆರೋನ್ ವಿಶಾಲ್ ಲಸ್ರಾದೋ (18), ಕೇರಳದ ಫೆಲಿಕ್ಸ್.ಪಿ.ಜೊಸೆಫ್ (20) ಎಂದು ಗುರುತಿಸಲಾಗಿದೆ. 

ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ ಮತ್ತು ಹೈಡ್ರೋ ವೀಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾಸಿಕ್ ಕಂಫರ್ಟ್ ಲಾಡ್ಜ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಸಯ್ಯದ್ ಅಫ್ರೀದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಫಾನ್ ಮತ್ತು ಫೆಲಿಕ್ಸ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 53.87 ಗ್ರಾಂ ಎಂಡಿಎಂಎ, 103.20 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ ಎಂಜಿ ಹೆಕ್ಟರ್ ವಾಹನವನ್ನು ಜಪ್ತಿ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಉತ್ತರ ಠಾಣಾ ಪೊಲೀಸರು ಬಂದರ್‌ನ ಗ್ರೀನ್ ಪಾರ್ಕ್ ಮೈದಾನದ ಬಳಿ ದಾಳಿ ನಡೆಸಿ ಎಡೆಲ್ ರೋಚ್ ಮತ್ತು ಆರೋನ್ ವಿಶಾಲ್ ಎಂಬುವವರನ್ನು ಬಂಧಿಸಿದ್ದು, ಅವರಿಂದ ಸುಮಾರು 1 ಕೆಜಿಗೂ ಅಧಿಕ ಗಾಂಜಾ ಮತ್ತು ಮಾರುತಿ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ತನಿಖೆಯ ವೇಳೆ ಡ್ರಗ್ಸ್ ಜಾಲದ ಅಂತರರಾಜ್ಯ ನಂಟು ಬಯಲಾಗಿದೆ. ಮುಂಬೈ ಮೂಲದ ಸಂದೀಪ್ ಶೆಟ್ಟಿ ಎಂಬಾತ ಹೈಡ್ರೋ ವೀಡ್ ಗಾಂಜಾವನ್ನು ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಅಲ್ಲಿಂದ ಮಂಗಳೂರಿಗೆ ತಲುಪಿಸಲು ಎಡೆಲ್ ರೋಚ್‌ನನ್ನು ನೇಮಿಸಿಕೊಳ್ಳಲಾಗಿತ್ತು. ಈ ಜಾಲವು ವ್ಯವಸ್ಥಿತವಾಗಿ ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತರಿಸಿ ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 


Ads on article

Advertise in articles 1

advertising articles 2

Advertise under the article