ಬಸ್–ಬೈಕ್ ಡಿಕ್ಕಿ: ಗಾಯಗೊಂಡಿದ್ದ ಯುವಕ ಮೃತ್ಯು
Tuesday, March 10, 2026
ಉಡುಪಿ ಸಂತೆಕಟ್ಟೆ ಲಕ್ಷ್ಮೀನಗರ ರಸ್ತೆಯಲ್ಲಿ ವಾರದ ಹಿಂದೆ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಹೆರ್ಗದ ಶೆಟ್ಟಿಬೆಟ್ಟು ನಿವಾಸಿ ಮೊಹಮ್ಮದ್ ಝೈದ್ (19) ಎಂದು ಗುರುತಿಸಲಾಗಿದೆ.
ಅಪಘಾತದ ಬಳಿಕ ಅವರನ್ನು ಉಡುಪಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ನಿಧನರಾದರು ಎಂದು ತಿಳಿದುಬಂದಿದೆ.ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಝೈದ್ ಶೀಘ್ರದಲ್ಲೇ ಗಲ್ಫ್ ರಾಷ್ಟ್ರಕ್ಕೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಮೃತರು ತಂದೆ–ತಾಯಿ ಹಾಗೂ ಒಬ್ಬ ಸಹೋದರರನ್ನು ಅಗಲಿದ್ದಾರೆ.
ಯುವಕನ ಅಕಾಲಿಕ ನಿಧನದಿಂದ ಕುಟುಂಬದವರಿಗೆ ಅಪಾರ ದುಃಖ ಉಂಟಾಗಿದೆ. ಮೃತರ ಅಂತ್ಯಕ್ರಿಯೆ ಆತ್ರಾಡಿ ಮಸೀದಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.