ಉಡುಪಿ ಜಿಲ್ಲೆಯ ಮೂವರಿಗೆ ಗಡಿಪಾರು ಆದೇಶ
Saturday, March 14, 2026
ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯುಳ್ಳ ಸಂದೇಶ, ಸುಶಾಂತ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಜಬ್ಬಾರ್ ಹುಸೇನ್ ಎಂಬುವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಈ ಪೈಕಿ ಕಾಪು ನಡ್ಸಾಲು ನಿವಾಸಿ ಜಬ್ಬಾರ್ ಹುಸೈನ್ ಎಂಬುವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಇದುವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿರುತ್ತದೆ.
ಹಿರಿಯಡ್ಕ ಠಾಣಾ ವ್ಯಾಪ್ತಿಯ ಪುತ್ತಿಗೆ ನಿವಾಸಿ ಸಂದೇಶ ಎಂಬಾತನ ವಿರುದ್ಧ ಐದು ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್ ತೆರೆಯಲಾಗಿರುತ್ತದೆ. ಅಂತೆಯೇ ಹಿರಿಯಡ್ಕ ಠಾಣಾ ವ್ಯಾಪ್ತಿಯ ಪಾಪುಜೆ ದರ್ಖಾಸ್ ನಿವಾಸಿ ಸುಶಾಂತ್ ವಿರುದ್ಧ ಮೂರು ಪ್ರಕರಣ ದಾಖಲಾಗಿದೆ.
ಜಬ್ಬಾರ್ ಹುಸೇನ್‌ನನ್ನು ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಗೆ, ಸಂದೇಶ್ ಎಂಬಾತನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಸುಶಾಂತ್ ಎಂಬಾತನನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.