ದಿವಾಳಿ ಸರಕಾರದ "ಶೂನ್ಯ ಭಾಗ್ಯ": ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಂಡಿಸಿದ 17ನೇ ರಾಜ್ಯ ಬಜೆಟ್ ಕರಾವಳಿ ಭಾಗದ ಜನರಲ್ಲಿ ಭಾರೀ ನಿರಾಸೆ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಭಾಗ ಬಜೆಟ್‌ನಲ್ಲಿ ಮತ್ತೆ ನಿರ್ಲಕ್ಷ್ಯಕ್ಕೆ ಗುರಿಯಾಗಿರುವುದು ಸ್ಪಷ್ಟವಾಗಿದೆ ಎಂದು ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿ ಭಾಗದ ಜನರು ರಾಜ್ಯಕ್ಕೆ ಅಪಾರ ತೆರಿಗೆ ಕೊಡುಗೆ ನೀಡುತ್ತಾರೆ. ಶಿಕ್ಷಣ, ಬ್ಯಾಂಕಿAಗ್, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಈ ಭಾಗವು ಕರ್ನಾಟಕದ ಹೆಮ್ಮೆಯಾಗಿದೆ. ಆದರೆ ಸರ್ಕಾರ ಬಜೆಟ್ ಮಂಡಿಸುವಾಗ ಮಾತ್ರ ಈ ಭಾಗವನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದ್ದಾರೆ.
ಮೀನುಗಾರರ ಬದುಕು ಸುಧಾರಣೆ, ಕಡಲ್ಕೊರೆತ ತಡೆ ಯೋಜನೆಗಳು, ಕರಾವಳಿ ರಕ್ಷಣಾ ಕಾಮಗಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿ, ಬಂದರುಗಳ ವಿಸ್ತರಣೆ, ಯುವಕರಿಗೆ ಉದ್ಯೋಗ ಸೃಷ್ಟಿ ಇಂತಹ ಪ್ರಮುಖ ವಿಷಯಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ. ಇದು ಕರಾವಳಿ ಭಾಗದ ಜನರ ಆಶಾಭಾವನೆಗಳಿಗೆ ದೊಡ್ಡ ಹೊಡೆತವಾಗಿದೆ.
ಕರಾವಳಿ ಭಾಗದ ಜನರ ವೋಟ್ ಬೇಕಾದಾಗ ಮಾತ್ರ ರಾಜಕೀಯ ಪಕ್ಷಗಳಿಗೆ ನಾವು ನೆನಪಾಗುತ್ತೇವೆ. ಆದರೆ ಬಜೆಟ್ ಹಂಚುವಾಗ ಕರಾವಳಿಯ ಅಭಿವೃದ್ಧಿ ಸಂಪೂರ್ಣವಾಗಿ ಮರೆತುಹೋಗುತ್ತದೆ. ಇದು ಕರಾವಳಿ ಜನರೊಂದಿಗೆ ಮಾಡಿದ ಅನ್ಯಾಯ ಎಂದು ಹೇಳಿದ್ದಾರೆ.
ಈ ಬಜೆಟ್ ನೋಡಿದಾಗ ಇದು ಸಂಪೂರ್ಣವಾಗಿ ಕರಾವಳಿ ಭಾಗವನ್ನು ಕಡೆಗಣಿಸಿರುವ ಬಜೆಟ್ ಎಂದು ಹೇಳುವುದರಲ್ಲಿ ತಪ್ಪಿಲ್ಲ. ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಯಾವುದೇ ಸ್ಪಷ್ಟ ಘೋಷಣೆಗಳಿಲ್ಲ. ಕರಾವಳಿ ಭಾಗದ ಜನರಿಗೆ ಇದು ಕಾಂಗ್ರೆಸ್ ಸರ್ಕಾರ ಮಾಡಿದ ದ್ರೋಹ ಎಂದು ಜನರು ಹೇಳಿದರೂ ಅಚ್ಚರಿಯಿಲ್ಲ. ಮೀನುಗಾರರು, ಕರಾವಳಿ ರಕ್ಷಣಾ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ ಯಾವುದಕ್ಕೂ ಸ್ಪಷ್ಟ ಯೋಜನೆ ಇಲ್ಲ. ಆದರೆ ಓಲೈಕೆ ರಾಜಕೀಯಕ್ಕೆ ಕೋಟಿ ಕೋಟಿ ಅನುದಾನ. ಇದು ಅಭಿವೃದ್ಧಿಯ ಬಜೆಟ್ ಅಲ್ಲ, ಕರಾವಳಿ ಭಾಗಕ್ಕೆ ಮಾಡಿದ ಅನ್ಯಾಯ. ಇದನ್ನು ಬೈಂದೂರು ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ಅನೇಕ ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ಘೋಷಣೆ ಮಾಡಲಾಗಿದೆ. ಒಂದು ಭಾಗದ ಜನರನ್ನು ತೃಪ್ತಿ ಪಡಿಸಲು ಮತ್ತೊಂದು ಭಾಗದ ಜನರನ್ನು ಸಂಪೂರ್ಣವಾಗಿ ಕಡೆಗಣಿಸುವುದು ಯಾವ ರೀತಿಯ ಸಮಾನತೆಯ ಆಡಳಿತ ಎಂಬ ಪ್ರಶ್ನೆಯನ್ನು ಬೈಂದೂರು ಬಿಜೆಪಿ ಯುವ ಮೋರ್ಚಾ ಸಾರ್ವಜನಿಕರ ಮುಂದೆ ಹಾಗೂ ಸರ್ಕಾರದ ಮುಂದೆ ಇಡುತ್ತಿದೆ. “ಕರಾವಳಿ ಭಾಗದ ಜನರು ತೆರಿಗೆ ಕಟ್ಟುವಾಗ ಕರ್ನಾಟಕದವರು. ಆದರೆ ಬಜೆಟ್ ಹಂಚುವಾಗ ಮಾತ್ರ ಮರೆತುಹೋಗುವವರೇ?” ಎಂಬ ಪ್ರಶ್ನೆ ಇಂದು ಕರಾವಳಿಯ ಪ್ರತಿಯೊಬ್ಬರ ಮನದಲ್ಲಿ ಮೂಡುತ್ತಿದೆ. ಕರಾವಳಿ ಭಾಗದ ಅಭಿವೃದ್ಧಿಯನ್ನು ಕಡೆಗಣಿಸುವಂತಹ ಯಾವುದೇ ನೀತಿಯನ್ನು ಜನರು ಸಹಿಸುವುದಿಲ್ಲ ಹಾಗೂ ಅಭಿವೃದ್ಧಿ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದು ಹೇಳಿದ್ದಾರೆ.