ನೀವು ಸಂಘರ್ಷಕ್ಕೆ ಎಡೆಮಾಡಿಕೊಟ್ಟರೆ ನಾವೂ ಸಿದ್ಧ; ಶಾಸಕ ಸುನಿಲ್ ಕುಮಾರ್ ಸವಾಲು (Video)
ಶಾಸಕರು ಮಾಡುವ ಜನಪರ ಅಭಿವೃದ್ಧಿ ಕೆಲಸಗಳನ್ನು ಪರಾಜಿತ ಅಭ್ಯರ್ಥಿಗಳು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಆಡಳಿತವಿದೆಯೆಂದು ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡದೇ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಶಾಸಕರು ತಮ್ಮ ಮುತುವರ್ಜಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹೊರಟರೆ ಪೊಲೀಸ್ ಬಲ ಪ್ರಯೋಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಕಂಬಳಕ್ಕೆ ಅನುದಾನ ಬಿಡುಗಡೆ ಮಾಡಿ ಸಹಕಾರ ಕೊಡಲಿ. ಅನುದಾನ ನೀಡುವುದಿಲ್ಲ ಎಂದಾದರೆ ಶಾಸಕರ ನೇತೃತ್ವದ ಕಂಬಳ ಸಮಿತಿ ನಿರ್ವಹಣೆ ಮಾಡುತ್ತದೆ. ಅದು ಬಿಟ್ಟು ಕಂಬಳವೇ ಸರಿಯಿಲ್ಲ ಎಂದು ಇನ್ನೊಂದು ಗುದ್ದಲಿ ಪೂಜೆ ಮಾಡಲು ಹೊರಟರೆ ನಾವು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಎರಡೂವರೆ ವರ್ಷದಲ್ಲಿ ನಾವು ಸಂಘರ್ಷ ಮಾಡಿಲ್ಲ. ಕರಾವಳಿಯ ಬಿಜೆಪಿ ಶಾಸಕರು ಅತ್ಯಂತ ಸಜ್ಜನಿಕೆಯಿಂದ ಉಸ್ತುವಾರಿ ಸಚಿವರಿಗೆ ಗೌರವ ನೀಡುತ್ತಿದ್ದೇವೆ. ಎರಡೂವರೆ ವರ್ಷದಿಂದ ನಾವು ನಿಮ್ಮೊಂದಿಗೆ ಸಂಘರ್ಷಕ್ಕೆ ಇಳಿದಿಲ್ಲ. ನೀವು ಸಂಘರ್ಷ ಮಾಡಲು ಎಡೆಮಾಡಿಕೊಟ್ಟರೆ ನಾವು ತಯಾರಿದ್ದೇವೆ ಎಂದು ಸವಾಲು ಹಾಕಿದರು.