ಅಕ್ರಮ ಜಾನುವಾರು ಸಾಗಾಟ: ಮೂವರು ಆರೋಪಿಗಳ ಬಂಧನ
ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿದ್ದಾರೆ.
ಮುಸ್ತಾಕ್ ಹುಸೇನ್ ಸಾಬ್ ನದಾಫ್ (29), ಸಲೀಂ ಹುಸೇನ್ ಸಾಬ್ ನದಾಫ್ (33) ಹಾಗೂ ನದೀಂ ಅಬ್ದುಲ್ ಖಾದರ್ (34) ಬಂಧಿತರು.
ಏಪ್ರಿಲ್ 5ರಂದು ಮುಂಜಾನೆ ಸುಮಾರು 5 ಗಂಟೆಗೆ ಪೊಲೀಸರು ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುವಾಗ, ಹುಲಿಕಲ್ ಘಾಟಿ ದಿಕ್ಕಿನಿಂದ ಬರುತ್ತಿದ್ದ ಟಾಟಾ ಇಂಟ್ರಾ ವಾಹನವನ್ನು ತಡೆದು ಪರಿಶೀಲಿಸಿದಾಗ ಎರಡು ಎತ್ತುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಚಾಲಕರನ್ನು ವಿಚಾರಿಸಿದಾಗ, ಜಾನುವಾರುಗಳನ್ನು ವಧೆಗಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ಜಾನುವಾರುಗಳ ಅಂದಾಜು ಮೌಲ್ಯ ರೂ.1 ಲಕ್ಷವಾಗಿದ್ದು, ವಾಹನದ ಮೌಲ್ಯ ರೂ.4 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ವೇಳೆ ಅದೇ ದಿಕ್ಕಿನಿಂದ ಟೊಯೋಟಾ ಇಟಿಯೊಸ್ ಕಾರು ಅಕ್ರಮ ಸಾಗಾಟಕ್ಕೆ ಬೆಂಗಾವಲಾಗಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಕಾರನ್ನು ತಡೆದು ನಿಲ್ಲಿಸಿದಾಗ, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾಗಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಜಾನುವಾರುಗಳೊಂದಿಗೆ ಎರಡೂ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.