-->
 ಮಗುವಿನ ಕೊಲೆ ಆರೋಪ ಎದುರಿಸುತ್ತಿದ್ದ ತಾಯಿ ಖುಲಾಸೆ

ಮಗುವಿನ ಕೊಲೆ ಆರೋಪ ಎದುರಿಸುತ್ತಿದ್ದ ತಾಯಿ ಖುಲಾಸೆ




ಉಡುಪಿ ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಮನೆಯೊಂದರಲ್ಲಿ ಮಗುವನ್ನು ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದ ತಾಯಿ ಹಸೀನಾ ಅವರ ವಿರುದ್ದ ಅಭಿಯೋಜನೆ ( ಪ್ರಾಸಿಕ್ಯೂಶನ್) ಆರೋಪವನ್ನು ಸಾಭೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಮೀವುಲ್ಲಾ ಅವರು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದಾರೆ. 

ಕೋವಿಡ್ ಸಂದರ್ಭದಲ್ಲಿ 2020 ರ ಎ.4 ರಂದು ಹಸೀನಾ ಅವರ ಕಿರಿಯ ಪುತ್ರ ಹಾಗು ಎ. 7 ರಂದು ಎರಡನೇ ಪುತ್ರಿಯೂ ನಿಧನರಾಗಿದ್ದರು. ಪುತ್ರನೂ ನ್ಯೂಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಮಗಳನ್ನು ಸ್ನಾನಗೃಹದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ದೂರಲಾಗಿತ್ತು. 

ಹಾವೇರಿಯ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಕ್ಕಳ ತಂದೆಯೂ ಕೋವಿಡ್‌ನಿಂದಾಗಿ ಪುತ್ರನ ಅಂತ್ಯಸಂಸ್ಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದಾದ ಮೂರು ದಿನಗಳ ನಂತರ (ಎ.7) ಅವರು ಮಲ್ಪೆಯ ಮನೆಗೆ ಆಗಮಿಸಿದ್ದರು.  

ಎ.7 ರಂದು ತಾಯಿ ಹಸೀನಾ ಅವರು ಮಗಳಿಗೆ ಸ್ನಾನ ಮಾಡಿಸಿದ್ದು, ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಮಗಳಿಗೆ ಅನಾರೋಗ್ಯ ಕಾಡಿತ್ತು. ಪತ್ನಿಯನ್ನು ವಿಚಾರಿಸಿದಾಗ ಮಗಳಿಗೆ ಕುತ್ತಿಗೆ ನೋವು ಎಂದು ಹೇಳಿದ್ದು, ತಕ್ಷಣ ಸಂಬಂಧಿಕರ ಕಾರಿನಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ, ಮಗಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದರು. 

ಮೂರು ದಿನದ ಅವಧಿಯಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆಯೂ, ಮಕ್ಕಳ ಸಾವಿನಲ್ಲಿ ಅನುಮಾನವಿದೆ. ಮಗಳಿಗೆ ಎ.7 ರಂದು ಮಧ್ಯಾಹ್ನದ ವೇಳೆ ತಾಯಿ ಸ್ನಾನ ಮಾಡಿಸಿದ್ದು, ಈ ವೇಳೆ ಬಕೆ‌ಟ್‌ನಲ್ಲಿ ಮುಳುಗಿಸಿ ಕೊಲೆ ಯತ್ನ ನಡೆಸಲಾಗಿತ್ತು. ಇದು ಅಸ್ವಾಭಾವಿಕ ಸಾವು ಎಂದು ಸಂಶಯಿಸಿ, ಪತ್ನಿ ವಿರುದ್ದ ಮಲ್ಪೆ ಠಾಣೆಯಲ್ಲಿ ದೂರು‌ ನೀಡಿದ್ದರು.

ಪ್ರಕರಣದ ತನಿಖೆಯಲ್ಲಿ ಆರಂಭಿಸಿದ ಪೋಲಿಸ್ ಇಲಾಖೆ ಘಟನೆ ನಡೆದ 10 ತಿಂಗಳ ಬಳಿಕ ಎಫ್‌ಎಸ್‌ಎಲ್ ವರದಿಯನ್ನು ಆಧರಿಸಿ, ತಾಯಿಯೇ ಮಗುವನ್ನು ಕೊಂದಿರಬಹುದು ಎಂಬ ಊಹೆಯಲ್ಲಿ ತಾಯಿ ಹಸೀನಾ ಅವರನ್ನು 2021 ರ ಫೆ.17 ರಂದು ಬಂಧಿಸಿತ್ತು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಒಟ್ಟು 11 ತಿಂಗಳು 29 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ 2022 ರ ಫೆ.15 ರಂದು ನ್ಯಾಯಾಲಯವು ಜಾಮೀನು ನೀಡಿತ್ತು. 

ಆರೋಪಿಯ ಪರವಾಗಿ ಹಿರಿಯ ವಕೀಲ ಎಮ್.ಶಾಂತಾರಾಮ್ ಶೆಟ್ಟಿ ವಾದಿಸಿದ್ದರು. 

ಸುಮೊಟೋ ಪ್ರಕರಣ ದಾಖಲು

2020 ರ ಎ.30 ರಂದು ಮಲ್ಪೆ ಠಾಣೆಗೆ ಹಾಜರಾಗಿ ಮಗುವಿನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಮೃತಳ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂದು ನಮೂದಿಸಿದ್ದರು. ನಂತರ ವೈದ್ಯರಿಗೆ ಕೆಲವು ಲಿಖಿತ ಪ್ರಶ್ನೆಗಳನ್ನು ಕೇಳಿದ್ದು,  ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡ ಬಕೇಟನ್ನು ತಲುಪಿಸಿ ಅಭಿಪ್ರಾಯ ಕೇಳಲಾಗಿತ್ತು. ಯಾರಾದರೂ ಮಗುವನ್ನು ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಹಿಡಿದಲ್ಲಿ ಮಗುವಿನ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು. ಅದರಂತೆ ಸುಮೊಟೋ ಪ್ರಕರಣವನ್ನು ದಾಖಲಿಸಲಾಗಿತ್ತು.

Ads on article

Advertise in articles 1

advertising articles 2

Advertise under the article