ವಿದ್ಯಾರ್ಥಿನಿಯರಿಗೆ 3 ದಿನ ಋತುಸ್ರಾವದ ರಜೆ ನೀಡಲು ಕೇರಳ ಸರಕಾರ ಚಿಂತನೆ
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರವು ಶಾಲಾ ಬಾಲಕಿಯರಿಗೆ ಋತುಸ್ರಾವದ ರಜೆ ನೀಡುವ ಯೋಜನೆಯನ್ನು ಜಾರಿ ಮಾಡುವ ಪ್ರಸ್ತಾಪ ಮುಂದಿಟ್ಟಿದೆ.
ಶುಕ್ರವಾರ ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಪ್ರಸ್ತಾವಿತ “ಗೌರವಯುತ ಋತಿಸ್ರಾವದ ಯೋಜನೆ” ('ಪ್ರಾಜೆಕ್ಟ್ ಮೆನ್ಸ್ಟ್ರುವಲ್ ಡಿಗ್ನಿಟಿ') ಅಡಿಯಲ್ಲಿ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹುಡುಗಿಯರು ಹಾಗೂ ಮಹಿಳೆಯರಿಗೆ ಹೆಚ್ಚು ಸ್ನೇಹಪರ ಮತ್ತು ಸುಲಭವಾಗಿ ತಲುಪುವಂತೆ ಮಾಡಲಾಗುವುದು.
ಈ ಯೋಜನೆಯ ಭಾಗವಾಗಿ, ಶಾಲೆಗಳ ವಿದ್ಯಾರ್ಥಿನಿಯರು ಪ್ರತಿ ತಿಂಗಳು ಮೂರು ದಿನಗಳವರೆಗೆ ಋತುಸ್ರಾವ ರಜೆಗೆ ಅರ್ಹರಾಗಿರುತ್ತಾರೆ. ರಜೆ ಪಡೆಯುವ ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ಹಿಂದುಳಿಯದಂತೆ ಖಚಿತಪಡಿಸಿಕೊಳ್ಳಲು ವಾರಾಂತ್ಯದಲ್ಲಿ ಕ್ಯಾಚ್-ಅಪ್ ತರಗತಿಗಳನ್ನು ನಡೆಸುವ ಪ್ರಸ್ತಾಪವೂ ಒಳಗೊಂಡಿದೆ.
"ಕೇರಳವನ್ನು ದೇಶದ ಅತ್ಯಂತ ಮಹಿಳಾ-ಸ್ನೇಹಿ ರಾಜ್ಯವನ್ನಾಗಿ ಪರಿವರ್ತಿಸುವುದು ಸರ್ಕಾರದ ಗುರುಯಾಗಿದೆ. ಕೆಲಸಗ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ ವೇತನವನ್ನು ಜಾರಿಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದೂ ರಾಜ್ಯಪಾಲರು ನೀತಿ ಭಾಷಣದಲ್ಲಿ ಹೇಳಿದ್ದಾರೆ.
ಈ ಪ್ರಸ್ತಾಪವು ಹಿಂದಿನ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರವು 2023ರ ಜನವರಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಪರಿಚಯಿಸಿದ ಇದೇ ರೀತಿಯ ಕ್ರಮದ ಮುಂದುವರಿದ ಭಾಗವಾಗಿರಲಿದೆ. ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ 2% ಹಾಜರಾತಿ ರಿಯಾಯಿತಿ ನೀಡಲಾಗಿತ್ತು. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (CUSAT) ಋತುಸ್ರಾವದ ರಜೆ ಪರಿಚಯಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಮಾತೃತ್ವ ಕಾಯ್ದೆ 1961ರ ಅಡಿಯಲ್ಲಿ ಮಕ್ಕಳ ಆರೈಕೆ ನಿಯಮಗಳನ್ನು ಜಾರಿಗೊಳಿಸುವ ಪ್ರಸ್ತಾಪವನ್ನೂ ಸರ್ಕಾರ ಮುಂದಿಟ್ಟಿದೆ. ಸಾರ್ವಜನಿಕ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು, ಐಟಿ ಪಾರ್ಕ್‌ಗಳು ಮತ್ತು 50ಕ್ಕಿಂತ ಹೆಚ್ಚು ಜನರನ್ನು ನೇಮಿಸಿಕೊಳ್ಳುವ ಎಲ್ಲಾ ಕಾರ್ಯಸ್ಥಳಗಳಲ್ಲಿ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಡೇ-ಕೇರ್ ಕೇಂದ್ರಗಳು ಹಾಗೂ ಶಿಶುಪಾಲನಾ ಕೇಂದ್ರಗಳನ್ನು ನಿರ್ವಹಿಸುವುದನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
ನೀತಿ ಭಾಷಣದ ಪ್ರಕಾರ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು.
ರಾಜ್ಯದಾದ್ಯಂತ ಪ್ರಮುಖ ಪಟ್ಟಣಗಳಲ್ಲಿ ಸಾರ್ವಜನಿಕ ಶೌಚಾಲಯ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಪಾದರಕ್ಷೆಗಳು ಹಾಗೂ ಇತರ ಅಗತ್ಯ ವಸ್ತುಗಳು ಸನಲಭವಾಗಿ ಮತ್ತು ಅಷ್ಟೇ ಗೌರವಯುತವಾಗಿ ಕೈಸೇರುವಂತಾಗಲು ಸರ್ಕಾರ ಈ ಯೋಜನೆಗಳನ್ನು ರೂಪಿಸಲಿದೆ.