-->
 ಉಡುಪಿಯಲ್ಲಿ ಮಳೆ ಕ್ಷೀಣ, ಬಿಸಿಲಿನ ತಾಪ ದ್ವಿಗುಣ

ಉಡುಪಿಯಲ್ಲಿ ಮಳೆ ಕ್ಷೀಣ, ಬಿಸಿಲಿನ ತಾಪ ದ್ವಿಗುಣ


ಮಳೆಗಾಲ ಆರಂಭವಾಗುವ ನಿರೀಕ್ಷೆಯಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬದಲಾಗಿ ಬಿಸಿಲಿನ ತಾಪಮಾನ ಮತ್ತು ಉಷ್ಣಾಂಶ ಹೆಚ್ಚಳ ಕಂಡುಬರುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಮೋಡ ಕವಿದ ವಾತಾವರಣ ಇದ್ದರೂ, ಮಧ್ಯಾಹ್ನ ವೇಳೆಗೆ ತೀವ್ರ ಬಿಸಿಲು ಜನರನ್ನು ಕಂಗೆಡಿಸುತ್ತಿದೆ.


ಬೆಳಿಗ್ಗೆಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ಉಷ್ಣಾಂಶ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರು ಹೊರಾಂಗಣ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಹೊರಗಡೆ ಕೆಲಸ ಮಾಡುವ ಕಾರ್ಮಿಕರು ಬಿಸಿಗಾಳಿಯ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ

ನಗರ ಪ್ರದೇಶದಲ್ಲಿ ಬಿಸಿಲಿನ  ಉರಿ್

ಉಡುಪಿ ನಗರ, ಮಣಿಪಾಲ, ಕುಂದಾಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಧ್ಯಾಹ್ನದ ವೇಳೆ ರಸ್ತೆಗಳು ವಿರಳವಾಗಿ ಕಾಣುತ್ತಿವೆ. ಬಿಸಿಲಿನ ತಾಪದಿಂದಾಗಿ ಜನರು ಅನಗತ್ಯ ಹೊರ ಸಂಚಾರವನ್ನು ಕಡಿಮೆ ಮಾಡುತ್ತಿದ್ದಾರೆ. ತಂಪು ಪಾನೀಯಗಳು, ಎಳನೀರು ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ.

ಮೇ ತಿಂಗಳ ಕೊನೆಯ ವಾರದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇತ್ತು. ಆದರೆ ನಿರಂತರ ಮಳೆಯ ಬದಲು ಚದುರಿದ ಮಳೆಯಷ್ಟೇ ಸುರಿದಿರುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದೆ. ತೇವಾಂಶವೂ ಅಧಿಕವಾಗಿರುವ ಕಾರಣ ಬಿಸಿಲಿನ ಅನುಭವ ಮತ್ತಷ್ಟು ಹೆಚ್ಚಾಗಿದೆ. 

ಆರೋಗ್ಯ ಇಲಾಖೆ ಸಲಹೆ

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸಾಕಷ್ಟು ನೀರು ಸೇವಿಸುವುದು, ಹಗುರವಾದ ಉಡುಪು ಧರಿಸುವುದು ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ವಲಯದಲ್ಲಿ ಆತಂಕ

ಕಳೆದ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಮಳೆ ಬಿರುಸುಗೊಂಡಿತ್ತು. ಅದೇ ಲೆಕ್ಕಾಚಾರದಲ್ಲಿ ಮಳೆಗಾಲದ ಆರಂಭಕ್ಕಾಗಿ ಕಾಯುತ್ತಿರುವ ರೈತರು ಮಳೆಯ ಕೊರತೆಯಿಂದ ಚಿಂತಿತರಾಗಿದ್ದಾರೆ. ಭತ್ತ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಆರಂಭಿಸಲು ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ವಿಳಂಬವಾದರೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ

ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಸದ್ಯ ಬಿಸಿಲಿನ ತಾಪ ಮತ್ತು ಉಷ್ಣಾಂಶ ಹೆಚ್ಚಾದರೂ ಶೀಘ್ರದಲ್ಲೇ ಮಳೆಯ ಚಟುವಟಿಕೆ ಚುರುಕುಗೊಳ್ಳುವ ನಿರೀಕ್ಷೆಯಿದೆ. 

ಒಟ್ಟಿನಲ್ಲಿ ಅಸ್ಥಿರ ಹವಾಮಾನದವು ಕರಾವಳಿಯ ಜನರ ದೈನಂದಿನ ಬದುಕಿನಲ್ಲೂ ಪರಿಣಾಮ ಬೀರಿದೆ. 



Ads on article

Advertise in articles 1

advertising articles 2

Advertise under the article