ಕಾರು ಡಿಕ್ಕಿ: ಬಾಲಕ ದಾರುಣ ಸಾವು
ಕಾರೊಂದು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಧ್ಯಾಹ್ನ ವೇಳೆ ಉಡುಪಿ ನೇಜಾರಿನ ಜ್ಯೋತಿ ನಗರ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ನೇಜಾರು ಆದರ್ಶ ನಗರದ ಇನಾಯತುಲ್ಲಾ ಎಫ್.ಎಂ. ಹಾಗೂ ಮುಸ್‌ರರಥ್ ಎಫ್.ಎಂ ದಂಪತಿ ಪುತ್ರ, ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಎಂದು ಗುರುತಿಸಲಾಗಿದೆ.
ಹೂಡೆ ಸಾಲಿಹಾತ್ ಪಿಯು ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಮುಸ್‌ರರಥ್, ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕ ತೆಗೆದುಕೊಂಡು ವಾಪಾಸ್ಸು ಮನೆಗೆ ಬರುತ್ತಿದ್ದಾಗ ದಾರಿ ಮಧ್ಯೆ ರೆಹಮಾನ್, ನಮಾಝ್ಗೆ ತೆರಳಲು ನೇಜಾರು ಆಯಿಷಾ ಮಸೀದಿ ಬಳಿ ಇಳಿದಿದ್ದನು.
ಅಲ್ಲಿ ರಸ್ತೆ ದಾಟುತ್ತಿದ್ದ ರೆಹಮಾನ್‌ಗೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆ ಹೋಗುತ್ತಿದ್ದ ಕಾರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಮೃತ ಬಾಲಕ ತಂದೆ ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.