ರುದ್ರ ದೇವರ ಪೂಜೆಯಿಂದ ಕಷ್ಟಗಳು ದೂರ: ವಿದ್ಯಾವಲ್ಲಭತೀರ್ಥ ಶ್ರೀ
ರುದ್ರ ದೇವರು ತನ್ನನ್ನು ನಂಬಿದ ಭಕ್ತರ ದುಃಖವನ್ನು ಪರಿಹರಿಸುವ ಕೆಲಸ ಮಾಡುತ್ತಾರೆ. ರುದ್ರ ದೇವರಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥಿಸುವ ಭಕ್ತರ ಎಲ್ಲ ಕಷ್ಟಕಾರ್ಪಣ್ಯವನ್ನು ದೂರ ಮಾಡುತ್ತಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ರುದ್ರಯಾಗದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಉಡುಪಿ ಪರ್ಯಾಯ ಮಹೋತ್ಸವದ ಮಾದರಿಯಲ್ಲೇ ಕೊಡವೂರಿನಲ್ಲಿ ಈ ಮಹಾರುದ್ರಯಾಗ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ. ಇದರ ಮುಖ್ಯ ರೂವಾರಿ ಪ್ರಸಾದ್ ರಾಜ್ ಕಾಂಚನ್ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.
ಉಡುಪಿಗೆ ಒಂದು ಒಳ್ಳೆಯ ನಾಯಕನ ಅಗತ್ಯವಿದೆ. ನಾನು ಯಾವುದೇ ಪಕ್ಷವಲ್ಲ. ಸಾತ್ವಿಕ, ಉಪಕಾರಿ ಆಗಿರುವ ವ್ಯಕ್ತಿ ಉಡುಪಿಯ ನಾಯಕನಾಗಿ ಬರಬೇಕು. ಉಡುಪಿ ಒಳ್ಳೆಯ ಅಭಿವೃದ್ಧಿ ಆಗಬೇಕು. ಜನರಿಗೆ ಒಳ್ಳೆಯ ಸೌಕರ್ಯಗಳು ಲಭಿಸಬೇಕು. ಕಾಂಚನ್ ಅವರು ಬಂಗಾರದ ಮನುಷ್ಯ, ಅವರ ಮನಸ್ಸು ಕೂಡ ಬಂಗಾರ. ಅದೇ ರೀತಿಯಲ್ಲಿ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಸಮಾಜದಲ್ಲಿ ವಿಶಿಷ್ಟವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಸ್ಥಾನವನ್ನು ಪಡೆಯುವ ಅನುಗ್ರಹವನ್ನು ಶಂಕರನಾರಾಯಣ ದೇವರು ಅವರಿಗೆ ನೀಡಲಿ ಎಂದುಹಾರೈಸಿದರು
ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ, ಸೇವಾಕರ್ತರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಧಾರ್ಮಿಕತೆಯ ಜೊತೆ ಸಾಮಾಜಿಕ, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ಸಂಕಲ್ಪದೊಂದಿಗೆ ಈ ಮಹಾ ರುದ್ರಯಾಗವನ್ನು ಹಮ್ಮಿಕೊಂಡಿದ್ದೇವೆ. ಕರಾವಳಿ ಜಿಲ್ಲೆ ಮೀನುಗಾರಿಕೆ ಅವಲಂಬಿತವಾಗಿದೆ. ಕಳೆದ ಹತ್ತು ವರ್ಷದಿಂದ ಮೀನುಗಾರಿಕೆ ಕುಂಠಿತವಾಗಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶಿಯ ಪುರೋಹಿತರನ್ನು ಕರೆಸಿ ಅರಬ್ಬೀಸಮುದ್ರಕ್ಕೆ ಗಂಗಾರತಿ ಮಾಡುವ ದೊಡ್ಡ ಸಂಕಲ್ಪವನ್ನು ಮಾಡಿದ್ದೇವೆ. ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಇಂತಹ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಲು ಉದ್ಯಮಿಗಳು ಮುಂದಾಗಬೇಕು ಎಂದರು.
ಮತ್ಸ್ಯೋದ್ಯಮಿ ಆನಂದ ಪಿ ಸುವರ್ಣ, ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೇಲಿಯೋ, ತೋಟದಮನೆ ದಿವಾಕರ ಶೆಟ್ಟಿ, ವಿಠಲ ಪೂಜಾರಿ, ಮಾಧವ ಬನ್ನಂಜೆ, ರಾಮಪ್ಪ ಸಾಲಿಯಾನ್, ಹರೀಶ್ ಶೆಟ್ಟಿ, ಸಂಚಾಲಕ ತಾರನಾಥ ಪೂಜಾರಿ, ಸಂತೋಷ್ ನಾಯ್ಕ್, ಕುಶಾಲ್ ಸಾಲಿಯಾನ್, ಕೃಷ್ಣಪ್ಪ ಗುರಿಕಾರ್, ಗೋಪಾಲ್ ಸಿ. ಬಂಗೇರ ಉಪಸ್ಥಿತರಿದ್ದರು. ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು.


