ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ: ಸಚಿವ ದಿನೇಶ್ ಗುಂಡೂರಾವ್
ಎಸ್‌ಐಆರ್ ವಿರುದ್ಧ ಕರ್ನಾಟಕದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ಯಾವುದೋ ಎಐ ಆಧರಿತ ಸಾಫ್ಟ್‌ವೇರ್ ಉಪಯೋಗಿಸಿಕೊಂಡು ಯಾರ ಮತಗಳನ್ನು ತೆಗೆಯಬೇಕೋ ಅದನ್ನು ತೆಗೆಯುವ ಕೆಲಸ ಆಗಿದೆ. ಅದಕ್ಕೆ ಅವಕಾಶ ಆಗಬಾರದು. ಬಿಹಾರದಲ್ಲಿ ಸಾಫ್ಟ್‌ವೇರ್ ಇರಲಿಲ್ಲ. ಅದನ್ನು ಪಶ್ಚಿಮ ಬಂಗಾಳದಲ್ಲಿ ಬಳಸಿದರು. ಕರ್ನಾಟಕದಲ್ಲಿ, ಪಂಜಾಬ್‌ನಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ. ಮುಖ್ಯ ಚುನಾವಣಾ ಆಯೋಗಕ್ಕೆ ಪರಮಾಧಿಕಾರ ನೀಡಲಾಗಿದೆ. ಕೋರ್ಟ್‌ಗಳು ಕೂಡಾ ಚುನಾವಣಾ ಆಯೋಗವನ್ನು ಪ್ರಶ್ನಿಸುವಂತಿಲ್ಲ. ಅಂತಹ ಕಾನೂನು ತರಲಾಗಿದೆ. ಚುನಾವಣಾ ಆಯೋಗದ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಧೀಶರನ್ನು ಯಾಕೆ ತೆಗೆದುಹಾಕಲಾಗಿದೆ. ಅಷ್ಟೊಂದು ಮುಕ್ತವಾಗಿ ಪಕ್ಷಪಾತ ಮಾಡಲಾಗುತ್ತಿದೆ. ಚುನಾವಣಾ ಆಯೋಗ, ಐಟಿ, ಇಡಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ ಹೊರತು, ದೇಶದ ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿ ಹಾಳಾಗಿ ಹೋದರೂ ಚಿಂತೆಯಿಲ್ಲ. ದೇಶದ ಪತ್ರಿಕಾ ಸ್ವಾತಂತ್ರ್ಯ ವಿಶ್ವದರ್ಜೆಯಲ್ಲಿ 157ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕಿಂತಲೂ ನಾವು ಹಿಂದೆ ಇದ್ದೇವೆ. ಎಂತಹ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದೊದಗಿದೆ. ನಮ್ಮ ದೇಶದ ಪ್ರಧಾನಿ, ಗೃಹ ಮಂತ್ರಿಯನ್ನು ಪ್ರಶ್ನಿಸುವ ಅಧಿಕಾರ ಮಾಧ್ಯಮಕ್ಕಿಲ್ಲ. ನಮಗೆ ಪ್ರಶ್ನೆ ಕೇಳುತ್ತೀರಾ, ರಾಹುಲ್ ಗಾಂಧಿಯನ್ನು ಪ್ರಶ್ನಿಸುತ್ತೀರಾ, ಅವರನ್ನು ಯಾಕೆ ಪ್ರಶ್ನಿಸುವುದಿಲ್ಲ. ಯಾವುದೋ ಒಂದು ಕಾಕ್ರೋಚ್ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಬ್ಲಾಕ್ ಮಾಡಲಾಗಿದೆ. ಅವರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದರೆ ಅಂತಹ ಖಾತೆಗಳನ್ನೇ ತಡೆ ಹಿಡಿಯಲಾಗುತ್ತದೆ. ಇದು ನಾವು ಹೇಳುತ್ತಿಲ್ಲ. ವಿಶ್ವ ಮಟ್ಟದಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿ ಸಿದರು.
ದಾವಣಗೆರೆ ಚುನಾವಣೆ ಬಳಿಕ ಸರಕಾರ ಮುಸ್ಲಿಂ ಓಲೈಕೆಯಲ್ಲಿ ತೊಡಗಿಕೊಂಡಿದೆ ಎಂಬ ಬಿಜೆಪಿ ಆರೋಪದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅವರಿಗೆ ಅದೇ ಕೆಲಸ. ಇಂತಹ ಆರೋಪ ಮಾಡುವ ಬಿಜೆಪಿಯವರು ನೀಟ್ ಸೋರಿಕೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ದೇಶದ 140 ಕೋಟಿ ಜನಸಂಖ್ಯೆಯಲ್ಲಿ 110 ಕೋಟಿ ಹಿಂದೂಗಳಿದ್ದಾರೆ. ಬಿಜೆಪಿಯವರು ಹಿಂದೂಗಳು ಅರಾಜಕತೆಯಲ್ಲಿದ್ದಾರೆ ಎಂಬ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ. ಹಿಂದೂಗಳಿಗೆ ಭದ್ರತೆ ಇಲ್ಲ. ಅನ್ಯಾಯ ಆಗುತ್ತಿದೆ ಎಂಬುದನ್ನು ಸೃಷ್ಟಿ ಮಾಡುವ ಅಜೆಂಡಾವೊಂದೇ ಬಿಜೆಪಿಯ ಮುಂದಿರುವುದು ಎಂದರು.
ನೀಟ್ ವಿಷಯದಲ್ಲಿ ದೇಶದ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಲಾಗುತ್ತಿದೆ. ಯಾವುದೇ ಒಂದು ಕಡೆ ಇಂತಹ ಸೋರಿಕೆ ಆದಾಗ ದೇಶದ ಎಲ್ಲಾ ಮಕ್ಕಳಿಗೂ ತೊಂದರೆಯಾಗುತ್ತದೆ. ಹಿಂದೆ ನಮ್ಮಲ್ಲಿಯೇ ಇದ್ದಾಗ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ನಮ್ಮ ರಾಜ್ಯದ ಮಕ್ಕಳ ಹಿತರಕ್ಷಣೆ ಮಾಡುವ ಸಾಮರ್ಥ್ಯ ರಾಜ್ಯಕ್ಕಿದೆ. ಯಾರೋ ಒಬ್ಬರನ್ನು ಅವಲಂಬಿಸಿ, ಅವರಿಗೆ ನಡೆಸಲಾಗದೆ, ನಿರ್ವಹಣೆ ಮಾಡಲಾಗದೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿದೆ. ಯಾಕೆ ಎಲ್ಲವೂ ಕೇಂದ್ರೀಕೃತವಾಗಬೇಕು. ಎಲ್ಲದಕ್ಕೂ ಯಾಕೆ ದಿಲ್ಲಿಯನ್ನು ನೋಡಬೇಕು. ಕರ್ನಾಟಕ ಪ್ರಗತಿಪರವಾಗಿದ್ದು, ಆಧುನಿಕ ತಂತ್ರಜ್ಞಾನ ಇದೆ. ಹಾಗಿರುವಾಗ ಎಲ್ಲವನ್ನೂ ದಿಲ್ಲಿಯಲ್ಲೇ ಮಾಡಬೇಕೆಂಬುದು ಸರಿಯಲ್ಲ. ಈ ವ್ಯವಸ್ಥೆಯಲ್ಲಿ ಇದೇನೋ ಹೊರಗೆ ಬಂತು. ಹೊರಗಡೆ ಬಾರದೆ ಅದೆಷ್ಟು ಇಂತಹ ಸೋರಿಕೆಗಳು ನಡೆದಿವೆಯೋ ಗೊತ್ತಿಲ್ಲ. ಇಂತಹ ವ್ಯವಸ್ಥೆಯಿಂದ ವಿಶ್ವಾಸಕ್ಕೆ ಘಾಸಿಯಾಗುತ್ತದೆ. ಸಿಇಟಿ ರಾಜ್ಯಕ್ಕೆ ಬಿಟ್ಟುಬಿಡಿ. ನಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.ಕಾಕ್ರೋಚ್ ಜನತಾ ಪಾರ್ಟಿ ಸೃಷ್ಟಿಗೆ ದೇಶದಲ್ಲಿ ಇರುವಂತಹ ಪರಿಸ್ಥಿತಿ ಕಾರಣ. ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪ್ರಧಾನಿ ಮೋದಿಯವರು ಯಾವ ರೀತಿಯಲ್ಲಿ ಭಾಷಣ ಮಾಡುತ್ತಿದ್ದರು. ಆದರೆ ಇದೀಗ ನಮ್ಮ ರೂಪಾಯಿ ಮೌಲ್ಯ ನೆಲಕಚ್ಚಿದೆ. ಅಮೆರಿಕದ ಡಾಲರ್ ಬಿಡಿ, ಪಾಕಿಸ್ತಾನ, ಬ್ಲಾಂಗ್ಲಾ ದೇಶದ ಜತೆಗೂ ನಾವು ಹೋಲಿಕೆ ಮಾಡುವಂತಿಲ್ಲ. ಅವರ ರೂಪಾಯಿ ಮೌಲ್ಯಕ್ಕಿಂತಲೂ ನಾವು ಹಿಂದೆ ಬೀಳುತ್ತಿದ್ದೇವೆ. ಹಾಗಿದ್ದರೆ ದೇಶದ ಭದ್ರತೆ, ಆರ್ಥಿಕ ಸ್ಥಿತಿ ಏನಾಗಿದೆ. ವಿಶ್ವಮಟ್ಟದಲ್ಲಿ ಜಿಡಿಪಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ ಎಂದು ಹೇಳುತ್ತಿದ್ದರು. ಇದೀಗ 6ನೆ ಸ್ಥಾನದಲ್ಲಿದ್ದೇವೆ. ಇಂತಹ ಅರಾಜಕತೆಯಲ್ಲಿ ಕಾಕ್ರೋಚ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗಿಂತ ಹೆಚ್ಚಿನ ಸಬ್‌ಸ್ಕ್ರಿಪ್ಶನ್ ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂಬ ಶಾಸಕ ರಾಜಣ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಕ್ಷದೊಳಗೆ ಯಾವುದೇ ಗೊಂದಲ ಅಥವಾ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರಿನಲ್ಲಿ ನಾವು ಎಲ್ಲರೂ ಒಟ್ಟಿಗೆ ಹೋಗಿ ಸಮಾವೇಶ ಮಾಡಿದ್ದೇವೆ. ಮಾಧ್ಯಮದವರು ಕೇಳಿದಾಗ ಕೆಲವರು ಮಾತನಾಡುತ್ತಾರೆ. ಕೇಳಿದಾಗ ಏನೋ ಹೇಳಿಬಿಡ್ತಾರೆ. ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂದು ಹೇಳಿದರು.