-->
ನಾಗರಮಠ ಮರಳುಗಾರಿಕೆ ಸ್ಥಳದಲ್ಲಿ ತಜ್ಞರ ಜಂಟಿ ಸಮಿತಿಯಿಂದ ಪರಿಶೀಲನೆ

ನಾಗರಮಠ ಮರಳುಗಾರಿಕೆ ಸ್ಥಳದಲ್ಲಿ ತಜ್ಞರ ಜಂಟಿ ಸಮಿತಿಯಿಂದ ಪರಿಶೀಲನೆ


ಉಡುಪಿ ಜಿಲ್ಲೆಯ ಬಾರಕೂರು ಸಮೀಪದ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ ಕಾನೂನು ನಿಯಮಗಳನ್ನು ಮೀರಿ ಹಾಗೂ ಪರಿಸರಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತದ ಸೂಚನೆ ಮೇರೆಗೆ ತಜ್ಞರ ಜಂಟಿ ಸಮಿತಿ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.


ಸ್ಥಳೀಯ ನಿವಾಸಿ ಗಣೇಶ್ ಶೆಟ್ಟಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಇಲಾಖೆಗಳ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಅದರಂತೆ ಸಮಿತಿ ದೋಣಿ ಮೂಲಕ ಮರಳುಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿತು.

ಸಮಿತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ವಿಭಾಗದ ಹಿರಿಯ ಪರಿಸರ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಹಕ ಇಂಜಿನಿಯರ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸುರತ್ಕಲ್ ಇಂಜಿನಿಯರಿಂಗ್ ಕಾಲೇಜು ಪರಿಸರ ಹಾಗೂ ಭೂವಿಜ್ಞಾನ ವಿಭಾಗದ ಮುಖ್ಯಸ್ಥರು, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು.

ಮರಳುಗಾರಿಕೆಯಲ್ಲಿ ನಡೆದಿರುವ ಅಕ್ರಮಗಳ ಸ್ವರೂಪ, ಪರಿಸರ ಹಾನಿ, ನದಿಯ ಪರಿಸರ ಸಮತೋಲನದ ಮೇಲೆ ಉಂಟಾದ ಪರಿಣಾಮ ಹಾಗೂ ಸರ್ಕಾರದ ಖಜಾನೆಗೆ ಉಂಟಾದ ಆರ್ಥಿಕ ನಷ್ಟದ ಪ್ರಮಾಣವನ್ನು ಅಂದಾಜು ಮಾಡುವ ಉದ್ದೇಶದಿಂದ ಈ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಏಪ್ರಿಲ್ 27ರಂದು ಉಡುಪಿ ಲೋಕಾಯುಕ್ತ ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಪರಿಶೀಲನೆ ವೇಳೆ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ವಿವಿಧ ಇಲಾಖೆಗಳು ಸ್ವತಂತ್ರವಾಗಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಸಮಾಧಾನ ವ್ಯಕ್ತಪಡಿಸಿ, ತಜ್ಞರ ಸಮಿತಿಯಿಂದ ಸಮಗ್ರ ವರದಿ ನೀಡುವಂತೆ ಸೂಚಿಸಿತ್ತು.

ಪರಿಶೀಲನೆ ವೇಳೆ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್, ವೃತ್ತ ನಿರೀಕ್ಷಕ ಮಂಜುನಾಥ್, ಎಡಿಎಲ್‌ಆರ್ ತಿಪ್ಪೆರಾಯ ತೊರವಿ, ಸಣ್ಣ ನೀರಾವರಿ ಇಲಾಖೆಯ ರಾಜುದ್ದೀನ್, ಅರಣ್ಯ ಇಲಾಖೆಯ ಶ್ರೀಧರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಕೀರ್ತಿ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article