ಅರಿಶಿನ ಕುಂಕುಮದ ನೀರಿನಿಂದ ಮಕ್ಕಳ ಕೈ ಅಚ್ಚು- ಗಮನ ಸೆಳೆದ ಸರ್ಕಾರಿ ಶಾಲೆಯ ಪ್ರಾರಂಭೋತ್ಸವ
Monday, June 01, 2026
ಉಡುಪಿ ತಾಲೂಕಿನ ದೊಡ್ಡಣಗುಡ್ಡೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೊತ್ಸವ ಸಾಂಪ್ರದಾಯಿಕ ಶೈಲಿಯಲ್ಲಿ ವಿಭಿನ್ನವಾಗಿ ಗಮನಸೆಳೆಯಿತು. ಅರಿಶಿನ ಕುಂಕುಮದ ನೀರಿನಿಂದ ಮಕ್ಕಳ ಕೈ ಅದ್ದಿ ಗೋಡೆಯ ಮೇಲೆ ಹಾಕಲಾದ ಬಿಳಿ ಹಾಳೆಯ ಮೇಲೆ ಅಚ್ಚೊತ್ತಿಸಲಾಯಿತು.
ಪ್ರಾರಂಭೋತ್ಸವಕ್ಕೂ ಮೊದಲು ಜಾಥಾ ಮೂಲಕ ವಿದ್ಯಾರ್ಥಿಗಳನ್ನ ಶಾಲೆಗೆ ಕರೆತರಲಾಯಿತು. ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ಆರತಿ ಎತ್ತಿ ಸ್ವಾಗತಿಸಿದರು. ಈ ವೇಳೆ ಅರಿಶಿನ ಕುಂಕುಮದ ನೀರಲ್ಲಿ ಮಕ್ಕಳ ಹಸ್ತವನ್ನು ಅದ್ದಿ ಗೋಡೆಯ ಮೇಲೆ ಹಾಕಲಾದ ಬಿಳಿ ಹಾಳೆಯ ಮೇಲೆ ಅಚ್ಚೊತ್ತಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಪಠ್ಯ ಪುಸ್ತಕ ವಿತರಣೆ ಬಳಿಕ ಸೆಲ್ಪೆ ಕಾರ್ನರ್ ನಲ್ಲಿ ಮಕ್ಕಳು ಖುಷಿಖುಷಿಯಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಎಸ್ ಡಿಎಂಸಿ ಅಧ್ಯಕ್ಷೆ ಜಾಹಿದಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಹಿತ್ ಕರಂಬಳ್ಳಿ, ನಿಕಟಪೂರ್ವ ಅಧ್ಯಕ್ಷ ಪರೀಕ್ಷಿತ್ ಶೇಟ್, ಶಾಲೆಯ ಕೊಡುಗೈ ದಾನಿ ಕೆಎಂ ಉಡುಪ ಧರ್ಮ ಪತ್ನಿ ಶಾಂತಾ ಉಡುಪ, ಜಯಂಟ್ಸ್ ಗ್ರೂಪ್ ನ ಅಧ್ಯಕ್ಷ ವಿನಯಕುಮಾರ್ ಪೂಜಾರಿ, ಗೃಹ ಮಂಡಳಿ ಅಧ್ಯಕ್ಷ ಸುಭ್ರಮಣ್ಯ ಶೇರಿಗಾರ್, ಸದಸ್ಯ ರಾಂ ಭಟ್,
ಒನ್ ಗುಡ್ ಸ್ಟೆಪ್ ಸಂಂಸ್ಥೆಯ ಸೃಜನ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಚಕಿ ರಮಣಿ ಧನ್ಯವಾದ ಸಲ್ಲಿಸಿದರು.
ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
ಕೇವಲ ಒಂಬತ್ತು ಮಕ್ಕಳ ಸಂಖ್ಯೆಯಿಂದ ಇನ್ನೇನು ಮುಚ್ಚುವ ಹಂತದಲ್ಲಿದ್ದ ಈ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಆಗಮಿಸಿದ ನಿರ್ಮಲಾ ಅವರು ಮನೆ ಮನೆ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮದ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದಾರೆ. ಈ ವರ್ಷ 35 ಹೊಸ ದಾಖಲಾತಿಯಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ 75 ಕ್ಕೆ ಏರಿಕೆಯಾಗಿದೆ. ಹಳೆ ವಿದ್ಯಾರ್ಥಿ ಸಂಘದ ಸಹಕಾರ ಹಾಗೂ ಮುಖ್ಯ ಶಿಕ್ಷಕಿ ನಿರ್ಮಲಾ ಅವರ ಅವಿರತ ಶ್ರಮದಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.




