ಮಲ್ಪೆ ಬಂದರಿನಲ್ಲಿ ಬೋಟುಗಳಿಗೆ ಲಂಗರು: ನಷ್ಟದಲ್ಲೇ ಮುಗಿದ ಮೀನುಗಾರಿಕಾ ಋತು
Tuesday, June 02, 2026
ಮಳೆಗಾಲದ ಮೀನುಗಾರಿಕೆ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಯಾಂತ್ರೀಕೃತ ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಉಂಟಾದ ಡೀಸೆಲ್ ಹಾಗೂ ಗ್ಯಾಸ್ ಕೊರತೆಯಿಂದಾಗಿ ಈ ಸಾಲಿನ ಮೀನುಗಾರಿಕಾ ಋತು ನಷ್ಟದಲ್ಲಿಯೇ ಅಂತ್ಯಗೊಂಡಿದೆ.
ಜೂನ್ 1ರಿಂದ ಕರ್ನಾಟಕ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಜಾರಿಯಾಗಿದೆ. ಮೀನುಗಳ ಸಂತಾನೋತ್ಪತ್ತಿ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿವರ್ಷ ಮಳೆಗಾಲದಲ್ಲಿ ಯಾಂತ್ರೀಕೃತ ಹಾಗೂ ಟ್ರಾಲ್ ಬೋಟುಗಳ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ ಬಾರಿ ಮುಂಗಾರು ವಿಳಂಬವಾದರೂ, ಮೀನುಗಾರಿಕಾ ನಿಷೇಧ ಆರಂಭವಾಗುವ ಮುನ್ನವೇ ಬಹುತೇಕ ಬೋಟುಗಳು ಕರಾವಳಿಗೆ ಮರಳಿವೆ. ಉಡುಪಿಯ ಮಲ್ಪೆ ಬಂದರಿನಲ್ಲಿ ಸಾವಿರಾರು ಬೋಟುಗಳು ಲಂಗರು ಹಾಕಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಾಲಿನ ಮೀನುಗಾರಿಕಾ ಋತು ಮೀನುಗಾರರಿಗೆ ಹೆಚ್ಚಿನ ಲಾಭ ತಂದುಕೊಡಲಿಲ್ಲ. ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಪರಿಣಾಮವಾಗಿ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಬೋಟುಗಳು ಸಮುದ್ರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಡೀಸೆಲ್ ಕೊರತೆಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡು ಅಪಾರ ನಷ್ಟ ಉಂಟಾಗಿದೆ.
ಡೀಸೆಲ್ ಮಾತ್ರವಲ್ಲದೆ ಮೀನುಗಾರರು ಅಡುಗೆಗಾಗಿ ಬಳಸುವ ಗ್ಯಾಸ್ ಸಿಲಿಂಡರ್‌ಗಳ ಕೊರತೆಯೂ ಎದುರಾಗಿದ್ದು, ಮೀನುಗಾರರನ್ನು ಕಂಗೆಡಿಸಿದೆ. ಅಗತ್ಯ ಇಂಧನ ಮತ್ತು ಗ್ಯಾಸ್ ಲಭ್ಯವಾಗದ ಕಾರಣ ಅನೇಕ ಬೋಟುಗಳು ಬಂದರಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.