-->
ಹೆಬ್ರಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಮೂವರು ಆರೋಪಿಗಳ ಬಂಧನ

ಹೆಬ್ರಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಮೂವರು ಆರೋಪಿಗಳ ಬಂಧನ


ಹೆಬ್ರಿಯ ಅನಂತನಗರ ನಿವಾಸಿ ಕೀರ್ತನ್ ಪ್ರಭು ಅವರ ಮನೆಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಹೆಬ್ರಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಸಲೀಂ, ಮೂಡುಬಿದಿರೆ ಮಿಜಾರು ನಿವಾಸಿ ಹರೀಶ್ ಶೆಟ್ಟಿ ಹಾಗೂ ಕೇರಳದ ಕಾಸರಗೋಡು ಮೂಲದ ಮಹಮ್ಮದ್ ಸಫ್ವಾನ್ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಹೆಬ್ರಿಯ ಅನಂತನಗರದಲ್ಲಿರುವ ಕೀರ್ತನ್ ಪ್ರಭು ಅವರ ಮನೆಗೆ ಕಳ್ಳರು  ನುಗ್ಗಿ ಸುಮಾರು 60 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಹೆಬ್ರಿ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. 

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್ ಅವರ ನಿರ್ದೇಶನ ಹಾಗೂ ಕಾರ್ಕಳ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

ಆರೋಪಿಗಳಿಂದ ಕಳವುಗೈದ ಚಿನ್ನಾಭರಣ, ಬೆಳ್ಳಿ ಆಭರಣಗಳು ಹಾಗೂ ಹವಳವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಸುಮಾರು 4 ಲಕ್ಷ ಮೌಲ್ಯದ ಮಾರುತಿ ಆಲ್ಟೋ ಕಾರನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ತನಿಖೆ ವೇಳೆ ಆರೋಪಿಗಳಿಂದ ಒಟ್ಟು 37.87 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಇತರೆ ಕಳವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್. ಮತ್ತು ರಾಘವೇಂದ್ರ, ಹೆಬ್ರಿ ಠಾಣೆಯ ಪಿಎಸ್‌ಐಗಳಾದ ರವಿ ಬಿ.ಕೆ. ಹಾಗೂ ಚಂದ್ರ ಎ.ಕೆ., ಕಾರ್ಕಳದ ಪಿಎಸ್‌ಐ ಪ್ರಸನ್ನ ಎಂ.ಎಸ್., ಶಿರ್ವ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ, ಪಡುಬಿದ್ರಿ ಠಾಣೆಯ ಎಎಸ್‌ಐ ರಾಜೇಶ್ ಪಿ. ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

Ads on article

Advertise in articles 1

advertising articles 2

Advertise under the article