-->
 ಉಡುಪಿಯಲ್ಲಿ " ಕೊಂಕಣಿ ರಂಗಾಂತರ " ರಂಗಭೂಮಿ ತರಬೇತಿ ಕಾರ್ಯಗಾರ

ಉಡುಪಿಯಲ್ಲಿ " ಕೊಂಕಣಿ ರಂಗಾಂತರ " ರಂಗಭೂಮಿ ತರಬೇತಿ ಕಾರ್ಯಗಾರ


ಉಡುಪಿ ಅನಂತ ವೈದಿಕ ಕೇಂದ್ರದ ಆಶ್ರಯದಲ್ಲಿ ಸುಪ್ರಸಿದ್ಧ ರಂಗಕರ್ಮಿ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಅವರ ನಿರ್ದೇಶನದಲ್ಲಿ ಎರಡು ದಿನಗಳ ಕೊಂಕಣಿ ರಂಗಾಂತರ ರಂಗಭೂಮಿ ತರಬೇತಿ ಕಾರ್ಯಗಾರವು ಉಡುಪಿಯ ಒಳಕಾಡು ಪದ್ಮಾವತಿ ಸಭಾ ಸದನದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಕೆ ತರಂಗ ವಾರಪತ್ರಿಕೆಯ ಸಂಪಾದಕಿ ಡಾ. ಸಂಧ್ಯಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕೊಂಕಣಿ ಸಾಹಿತ್ಯ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಕಲೆ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ಅವರನ್ನು ಸಮಾಜದ ಅಮೂಲ್ಯ ಆಸ್ತಿಯನ್ನಾಗಿ ರೂಪಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಕಲಾವಿದರಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಯ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಸಮಾಜದ ಎಲ್ಲ ವರ್ಗದ ಜನರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು–ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ನಾಯಕ್, ದೈವಜ್ಞ ಬ್ರಾಹ್ಮಣ ಸಮಾಜ ಉಡುಪಿ ಅಧ್ಯಕ್ಷ ಶಿವಶಂಕರ ಶೇಟ್ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಸಮಾಜಸೇವಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ವಹಿಸಿದ್ದರು. ಕೊಂಕಣಿ ರಂಗಾ ತರಂಗದ ಸಂಚಾಲಕ ಶಶಿಭೂಷಣ ಕಿಣಿ ಉಪಸ್ಥಿತರಿದ್ದರು.

ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೇದಮೂರ್ತಿ ಚೆಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಭಾಷೆ ಮಾತನಾಡುವ ವಿವಿಧ ಸಮಾಜಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಮೇ 31ರಂದು ನಡೆದ ಸಮಾರೋಪ ಸಮಾರಂಭದಲ್ಲಿ ತೋನ್ಸೆ ರಂಗ ಪೈ, ಗಣೇಶ್ ಕಂಡ್ಲೂರು, ಮಾಧವ ಶೇಟ್, ಕಮಲಾಕ್ಷ ಶೇಟ್, ಆನಂದ್ ನಾಯಕ್ ಮಲ್ಪೆ, ಶ್ವೇತಾ ಸುಧಾ ಪೈ ಹಾಗೂ ರಾಜಗೋಪಾಲ್ ಶೇಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಎರಡು ದಿನಗಳ ಈ ತರಬೇತಿ ಕಾರ್ಯಾಗಾರವು ಕೊಂಕಣಿ ರಂಗಭೂಮಿ ಕ್ಷೇತ್ರದ ಬೆಳವಣಿಗೆಗೆ ಹೊಸ ಚೈತನ್ಯ ತುಂಬಿದ್ದು, ಯುವ ಪ್ರತಿಭೆಗಳಿಗೆ ತಮ್ಮ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿತ್ತು.


 


Ads on article

Advertise in articles 1

advertising articles 2

Advertise under the article