"ಆನಂದ ಶರಧಿ" ಪಾರಮಾರ್ಥಿಕ ಸಾಧನೆಗೆ ಪ್ರೇರಣೆಯಾಗಲಿ: ಕೃಷ್ಣಾಪುರ ಶ್ರೀ
ಮಧ್ವಾಚಾರ್ಯರಿಗೆ ಶ್ರೀಕೃಷ್ಣ ದೊರೆತ ಪರಮ ಪವಿತ್ರ ಸ್ಥಳ ಮಲ್ಪೆ ಕಡಲ ತೀರದಲ್ಲಿ ಆಧ್ಯಾತ್ಮಿಕ ಸ್ಥಳವಾಗುವ ಪ್ರಯತ್ನಗಳು ಆಗಬೇಕಿದೆ. ಈ ಮೂಲಕ ಪಾರಮಾರ್ಥಿಕ ಆನಂದ ಸಾಧನೆಗೆ ಪ್ರೇರಣೆಯಾಗಬೇಕು ಎಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಕಡಲ ತೀರದ ಆನಂದ ಶರಧಿಯಲ್ಲಿ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ವತಿಯಿಂದ ಮಾತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಲೋಕವೇ ಸಮಸ್ತ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲಾ ಜೀವಿಸುತ್ತಿದ್ದೇವೆ. ಆದರೆ ನಾವು ಇಲ್ಲಿರುವುದು ಕೆಲವೇ ದಿನ ಮಾತ್ರ ಎಂಬ ವಾಸ್ತವ ತಿಳಿಯಬೇಕಿದೆ. ಮನುಷ್ಯ ಸಂಬಂಧಗಳು ಶಾಶ್ವತವಲ್ಲ. ನಮಗೆ ದೇವರ ಜೊತೆಗಿನ ಸಂಪರ್ಕ ಶಾಶ್ವತವಾಗಿದೆ. ದೇವರು ಮತ್ತು ನಮ್ಮ ಸಂಬಂಧ ಉಳಿಯಬೇಕಾದರೆ ಸತ್ಕಾರ್ಯ ಮಾಡಬೇಕು. ಜಡ ಬದುಕು ಬಾಳದೆ ತತ್ವವಾದದ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ ಸತ್ಕಾರ್ಯ ಮತ್ತು ಸತ್ಸಂಗಗಳನ್ನು ಮಾಡಬೇಕು. ಪ್ರಪಂಚ ಎಲ್ಲವೂ ಪರಮಾತ್ಮನ ಮನೆ. ಭೂಮಿಯನ್ನು ಮಾತೃ ಸ್ಥಾನದಲ್ಲಿ ಇಟ್ಟುಕೊಂಡಿದ್ದೇವೆ. ಭೂಮಿಯ ಆರಾಧನೆ ನಡೆದರೆ ತಾಯಿಯ ಆರಾಧನೆ ನಡೆದಂತೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕ. ಸ್ಥಳದ ಪಾವಿತ್ರ್ಯತೆ ಹೆಚ್ಚಿಸಲು ಭಜನೆ , ಮಾತೃವಂದನೆ ಮುಂತಾದ ಕಾಯಕ್ರಮಗಳ ಮೂಲಕ ಜನರ ಸಮಾಗಮ ಏರ್ಪಡಿಸಲಾಗಿದೆ. ಮಧ್ವಾಚಾಯರ ಇಷ್ಟಾರ್ಥ ನೆರವೇರಿಸಿದ ಈ ಸ್ಥಳ ಜನರ ಬಯಕೆಗಳನ್ನು ಈಡೇರಿಸಲಿದೆ ಎಂದರು.
ವಾಗ್ಮಿ ಹಾಗೂ ಆಧ್ಯಾತ್ಮಿಕ ಚಿಂತಕಿ ಡಾ. ಆರತಿ ವಿ. ಬಿ. ದಿಕ್ಸೂಚಿ ಭಾಷಣ ಮಾಡಿ, ಮನೆವಾರ್ತೆ ನೋಡಿಕೊಳ್ಳುವುದು ಶಿಕ್ಷೆಯಲ್ಲ ಜವಾಬ್ದಾರಿ. ಗೃಹಿಣೆ ವಾತ್ಸಲ್ಯಮಯಿಯಾಗಿರುವ ಮನೆಯಲ್ಲಿ ವೀರೋದ್ಧಾತಚರಿತ್ರವಂತರು ಜನ್ಮತಾಳುತ್ತಾರೆ. ಇತಿಹಾಸವನ್ನು ಗಮನಿಸಿದರೆ ಈ ಮಾತು ನಿಜವಾಗಿದೆ. ಸ್ತುತಿ ಮತ್ತು ನಿಂದನೆಗೆ ಅಂಜದೆ ಕುಟುಂಬವನ್ನು ಪೋಷಿಸಿದ ಕರ್ಮಫಲವನ್ನು ದೇವರು ನೀಡುತ್ತಾನೆ. ಮನೆ ಮಹಿಳೆಗೆ ಕರ್ಮಯೋಗದ ವೇದಿಕೆ. ಸನಾತನ ಧರ್ಮದಲ್ಲಿ ಸ್ತ್ರೀ ಲಕ್ಷ್ಮೀ ಸ್ವರೂಪಿಣಿ ಎಂದು ಹೇಳಿದರು.
ಪ್ರಾಚೀನ ಕಾಲದಲ್ಲಿ ಸ್ತ್ರೀಯರ ಸಶಕ್ತೀರಣವಾಗಿಲ್ಲ. ಬ್ರಿಟೀಷರು ಬಂದ ಮೇಲೆ ಶಿಕ್ಷಣ ದೊರೆತಿದೆ ಮುಂತಾದ ಭ್ರಾಂತಿಯನ್ನು ಎಡಪಂಥೀಯ ಚಿಂತಕರು ಶಿಕ್ಷಣ ವ್ಯವಸ್ಥೆಯಲ್ಲಿ ರೂಪಿಸಿದ್ದಾರೆ. ವಾಸ್ತವದಲ್ಲಿ ಹಿಂದಿನ ಕಾಲದಲ್ಲಿ ವೇದಾಧ್ಯಯನ ಹೊರತುಪಡಿಸಿ ಉಳಿದ ಏಲ್ಲಾ ವಿಧದ ಶಿಕ್ಷಣವನ್ನು ಮಹಿಳೆಯರಿಗೆ ನೀಡಲಾಗುತ್ತಿತ್ತು. ಶೌರ್ಯವಂತೆಯರು ಹಾಗೂ ಅತ್ಯಂತ ಹೆಚ್ಚು ಸಾಕ್ಷರರಾದ ಹೆಣ್ಮಕ್ಕಳು ಭಾರತದಲ್ಲಿದ್ದರು. ಝಾನ್ಸಿರಾಣಿ ಲಕ್ಷ್ಮೀ ಬಾಯಿ, ದುರ್ಗಾವತಿ, ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಮುಂತಾದ ಅನೇಕ ಉದಾಹರಣೆಗಳನ್ನು ನೀಡಬಹುದು ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್‌ನ ಡಿ.ಜಿ.ಎಂ. ವಾದಿರಾಜ್, ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಹಿರಿಯ ಸಂಘಟಕಿ ಉಷಾ ಎ. ಸುವರ್ಣ, ಎಸ್.ಎನ್.ಎಸ್.ಎನ್. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ, ಸಂಗೀತ ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ವೈಜಯಂತಿ ಕಾಮತ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ನಿಕಟಪೂರ್ವ ನಗರಸಭಾ ಸದಸ್ಯೆ ರಶ್ಮಿ ಭಟ್, ಲಕ್ಷಿ ಮಂಜುನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಶೋಭಾ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

