-->
 ಉಡುಪಿಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 203 ಪ್ರಕರಣ ದಾಖಲು, 71 ಸಾವಿರ ರೂ. ದಂಡ ವಸೂಲಿ

ಉಡುಪಿಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 203 ಪ್ರಕರಣ ದಾಖಲು, 71 ಸಾವಿರ ರೂ. ದಂಡ ವಸೂಲಿ


ಶಾಲಾ ಮಕ್ಕಳ ಸುರಕ್ಷತೆ ಉದ್ದೇಶದಿಂದ ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಶಾಲಾ ವಾಹನಗಳ ವಿಶೇಷ ತಪಾಸಣೆ ನಡೆಸಿದ್ದು, ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ 203 ಪ್ರಕರಣಗಳು ದಾಖಲಾಗಿವೆ. ಸುಮಾರು 71,000 ರೂ. ದಂಡ ವಸೂಲಿ ಮಾಡಲಾಗಿದೆ.


ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 483 ಶಾಲಾ ವಾಹನಗಳನ್ನು ಪರಿಶೀಲಿಸಲಾಯಿತು. ತಪಾಸಣೆಯ ವೇಳೆ ಅತಿಯಾದ ಮಕ್ಕಳ ಸಾಗಾಟಕ್ಕೆ ಸಂಬಂಧಿಸಿದ 112 ಪ್ರಕರಣಗಳು, ಸಮವಸ್ತ್ರವಿಲ್ಲದೆ ವಾಹನ ಚಾಲನೆ ಮಾಡಿದ 58 ಪ್ರಕರಣಗಳು ಹಾಗೂ ಇತರೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 33 ಪ್ರಕರಣಗಳು ಸೇರಿ ಒಟ್ಟು 203 ಪ್ರಕರಣಗಳು ದಾಖಲಾಗಿವೆ.

ಕಾರ್ಯಾಚರಣೆಯ ವೇಳೆ ಶಾಲಾ ಬಸ್‌ಗಳು, ವ್ಯಾನ್‌ಗಳು, ಆಟೋ ರಿಕ್ಷಾಗಳು ಸೇರಿದಂತೆ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಮನೆಗೆ ಸಾಗಿಸುವ ವಿವಿಧ ವಾಹನಗಳನ್ನು ಪರಿಶೀಲಿಸಲಾಯಿತು. ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಶಾಲಾ ವಾಹನಗಳಿಗೆ ಕಡ್ಡಾಯವಾಗಿರುವ ಸುರಕ್ಷತಾ ಮಾನದಂಡಗಳು, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ನಿಗದಿತ ಸಂಖ್ಯೆಗೆ ಮೀರಿದ ಮಕ್ಕಳ ಸಾಗಣೆ ಕುರಿತು ಅಧಿಕಾರಿಗಳು ತಪಾಸಣೆ ನಡೆಸಿದರು.

ತಪಾಸಣೆಯಲ್ಲಿ ಸಂಚಾರ ನಿಯಮಗಳು ಹಾಗೂ ಶಾಲಾ ವಾಹನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಜೊತೆಗೆ ವಾಹನ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಗಳಿಗೆ ಶಾಲಾ ಮಕ್ಕಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿಯೂ ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article