-->
47 ವರ್ಷಗಳಿಂದ ಬೀಡಿನಗುಡ್ಡೆ ಸ್ಮಶಾನ ಕಾಯುತ್ತಿರುವ 77ರ ಹರೆಯದ  ದಿಟ್ಟ ಮಹಿಳೆ ವನಜಕ್ಕ

47 ವರ್ಷಗಳಿಂದ ಬೀಡಿನಗುಡ್ಡೆ ಸ್ಮಶಾನ ಕಾಯುತ್ತಿರುವ 77ರ ಹರೆಯದ ದಿಟ್ಟ ಮಹಿಳೆ ವನಜಕ್ಕ


ಸಮಾಜದಲ್ಲಿ ಕೆಲವು ಸೇವೆಗಳು ಪ್ರಚಾರದ ಬೆಳಕಿಗೆ ಬರುವುದಿಲ್ಲ. ಅವುಗಳಿಗೆ ಪ್ರಶಂಸೆಯ ನಿರೀಕ್ಷೆಯೂ ಇರುವುದಿಲ್ಲ, ಪ್ರತಿಫಲದ ಬಯಕೆಯೂ ಇರುವುದಿಲ್ಲ. ಆದರೆ ಅಂತಹ ಸೇವೆಗಳೇ ಮಾನವೀಯತೆಯ ನಿಜವಾದ ಮೌಲ್ಯವನ್ನು ಸಾರುತ್ತವೆ. ಉಡುಪಿಯ ಬೀಡಿನಗುಡ್ಡೆಯ 77 ವರ್ಷದ ವನಜಕ್ಕ ಅವರ ಬದುಕು ಇಂತಹ ಮೌನ ಸೇವೆಗೆ ಜೀವಂತ ಸಾಕ್ಷಿಯಾಗಿದೆ.


ಇವರು ಕೇವಲ ಸ್ಮಶಾನದ ಸಿಬ್ಬಂದಿಯಲ್ಲ... ಸಾವಿರಾರು ಕುಟುಂಬಗಳ ದುಃಖದ ಕ್ಷಣದಲ್ಲಿ ಆಸರೆಯಾದವರು. ಯಾರೂ ವಾರಸುದಾರರಿಲ್ಲದ ಅನಾಥ ಹೆಣಗಳ ಪಾಲಿಗೆ ತಾಯಿಯಾದವರು. ಬದುಕಿನ ಕೊನೆಯ ಗೌರವವನ್ನು ಮನುಷ್ಯನಿಗೆ ತಲುಪಿಸುವ ಮಾನವೀಯತೆಯ ಜೀವಂತ ಪ್ರತಿರೂಪ.ಬಹುತೇಕ ಜನರು ಸ್ಮಶಾನದ ಹೆಸರೇ ಕೇಳಿದರೆ ಹೆದರುತ್ತಾರೆ. ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ಆದಷ್ಟು ಬೇಗ ಹಿಂದಿರುಗಲು ಬಯಸುತ್ತಾರೆ. ಆದರೆ ವನಜಕ್ಕ ಅವರ ಬದುಕಿನ ಬಹುಭಾಗವೇ ಇದೇ ಸ್ಮಶಾನದಲ್ಲಿ ಕಳೆದಿದೆ. ಬಿಸಿಲಿರಲಿ... ಮಳೆಯಿರಲಿ... ಮಧ್ಯರಾತ್ರಿಯ ಕರೆಯಿರಲಿ... ಹಬ್ಬ-ಹರಿದಿನಗಳಿರಲಿ... ಅವರಿಗೆ ರಜೆ ಎಂಬುದೇ ಇಲ್ಲ.


ಸ್ಮಶಾನಕ್ಕೆ ಮೃತದೇಹ ಬಂದ ಕ್ಷಣದಿಂದ ಹಿಡಿದು, ಚಿತೆಗೆ ಅಗ್ನಿ ಸ್ಪರ್ಶವಾಗುವ ಕೊನೆಯ ಕ್ಷಣದವರೆಗೆ ಎಲ್ಲವೂ ಗೌರವಯುತವಾಗಿ ನಡೆಯಬೇಕು ಎಂಬ ಕಾಳಜಿಯೇ ಅವರ ಮೊದಲ ಆದ್ಯತೆ. ಜೀವನದ ಕೊನೆಯ ಕ್ಷಣದಲ್ಲಿಯೂ ಪ್ರತಿಯೊಬ್ಬರಿಗೂ ಗೌರವ ಸಿಗಬೇಕು ಎಂಬ ಧ್ಯೇಯವನ್ನು ಹೊಂದಿರುವ ವನಜಕ್ಕ, ಸ್ಮಶಾನದ ಕೆಲಸವನ್ನು ಕೇವಲ ವೃತ್ತಿಯಾಗಿ ನೋಡದೆ ಒಂದು ಸಾಮಾಜಿಕ ಜವಾಬ್ದಾರಿಯಾಗಿ ಸ್ವೀಕರಿಸಿದ್ದಾರೆ. ಅವರ ಬದುಕು ಸೇವೆ, ತ್ಯಾಗ ಮತ್ತು ಧೈರ್ಯದ ಅಪರೂಪದ ಕಥೆಯಾಗಿದೆ.

ಸುಮಾರು ಐದು ದಶಕಗಳ ಹಿಂದೆ ನಡೆದ ಒಂದು ಘಟನೆ ವನಜಕ್ಕ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ, ಕುಡಿದು ಮೃತಪಟ್ಟಿದ್ದ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಯಾರೂ ಮುಂದೆ ಬಾರದ ಪರಿಸ್ಥಿತಿ ಎದುರಾಯಿತು. ಆಗ ಅಲ್ಲಿದ್ದ ಹಿರಿಯರ ಮನವಿಗೆ ಸ್ಪಂದಿಸಿದ ವನಜಕ್ಕ ಹಾಗೂ ಅವರ ಪತಿ ಆ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಆ ಒಂದು ಸೇವೆಯೇ ಮುಂದೆ ಅವರ ಬದುಕಿನ ಧ್ಯೇಯವಾಯಿತು. ನಂತರ ಯಾವುದೇ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಅಂತಿಮ ಪಯಣದಲ್ಲಿರುವವರಿಗೆ ಗೌರವಯುತ ವಿದಾಯ ನೀಡುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಪತಿಯ ನಿಧನ ವನಜಕ್ಕ ಅವರ ಬದುಕಿನಲ್ಲಿ ದೊಡ್ಡ ಆಘಾತ ತಂದಿತು. ಆದರೆ ಅವರು ತಮ್ಮ ಸೇವೆಯನ್ನು ಕೈಬಿಡಲಿಲ್ಲ. "ಇದು ನನ್ನ ಗಂಡನ ಜವಾಬ್ದಾರಿ, ಇದನ್ನು ನಾನು ಮುಂದುವರಿಸಬೇಕು" ಎಂಬ ದೃಢ ಮನಸ್ಸಿನಿಂದ ಒಬ್ಬರೇ ಈ ಕಾಯಕವನ್ನು ಮುಂದುವರಿಸಿದರು. ತಿಂಗಳಿಗೆ ಕೇವಲ 300 ರೂಪಾಯಿ ಸಂಬಳದ ಆದಾಯದಲ್ಲೇ ಮಕ್ಕಳನ್ನು ಸಾಕಿ, ಅವರಿಗೆ ಶಿಕ್ಷಣ ನೀಡಿ, ಮದುವೆ ಮಾಡಿ, ಕುಟುಂಬವನ್ನು ಕಟ್ಟಿದ ವನಜಕ್ಕ ಅವರ ಜೀವನ ಹೋರಾಟದ ಪ್ರತೀಕವಾಗಿದೆ.

ಸ್ಮಶಾನದಲ್ಲಿ ಕೆಲಸ ಮಾಡಲು ಭಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ "ಜೀವಂತ ಇದ್ದಾಗ ನಮ್ಮೊಂದಿಗೆ ಮಾತನಾಡಿದವರೇ ಕೊನೆಗೆ ಇಲ್ಲಿಗೆ ಬರುತ್ತಾರೆ. ಅದರಲ್ಲಿ ಭಯಪಡುವುದೇನು?" ಎಂಬ ಅವರ ಮಾತು ಬದುಕಿನ ಅನಿತ್ಯತೆಯನ್ನು ನೆನಪಿಸುತ್ತದೆ. ಆದರೆ ಚಿಕ್ಕ ಮಕ್ಕಳ ಅಂತಿಮ ಸಂಸ್ಕಾರದ ಸಂದರ್ಭ ಮಾತ್ರ ಅವರ ಮನಸ್ಸು ಕರಗುತ್ತದೆ. "ಆ ಪುಟ್ಟ ಜೀವಗಳನ್ನು ನೋಡಿದಾಗ ಕಣ್ಣೀರು ತಡೆಯಲು ಸಾಧ್ಯವಾಗುವುದಿಲ್ಲ" ಎಂದು ಅವರು ಭಾವುಕರಾಗುತ್ತಾರೆ.

ವನಜಕ್ಕ ಅವರ ಸೇವೆಯ ಪಯಣದಲ್ಲಿ ಅನೇಕ ಕಠಿಣ ಸಂದರ್ಭಗಳು ಎದುರಾಗಿವೆ. ಒಂದೇ ದಿನದಲ್ಲಿ 12 ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಿದ ಅನುಭವವೂ ಅವರಿಗೆ ಇದೆ. ದೈಹಿಕವಾಗಿ ವಯಸ್ಸಾಗಿದ್ದರೂ ಸೇವೆಯ ಮೇಲಿನ ಅವರ ಬದ್ಧತೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಸ್ಮಶಾನದ ಚಿತೆಯ ಮುಂದೆ ಎಲ್ಲರೂ ಒಂದೇ. ಅಲ್ಲಿ ಶ್ರೀಮಂತ-ಬಡವ ಎನ್ನುವ ವ್ಯತ್ಯಾಸವಿಲ್ಲ..ಜಾತಿ ಮತ ಹೆಸರಿಲ್ಲ..ಉಳಿಯುವುದು ಕೇವಲ ಮನುಷ್ಯತ್ವ ಮಾತ್ರ. ಈ ಸತ್ಯವನ್ನು ವನಜಕ್ಕ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬದುಕಿನ ಮೂಲಕ ಸಾರುತ್ತಿದ್ದಾರೆ.

ಸ್ಮಶಾನದಲ್ಲಿ ಕೆಲಸ ಮಾಡುವುದು ದೈಹಿಕವಾಗಿ ಎಷ್ಟು ಕಷ್ಟವೋ, ಮಾನಸಿಕವಾಗಿಯೂ ಅಷ್ಟೇ ಸವಾಲಿನದ್ದು. ಪ್ರತಿದಿನ ದುಃಖ. ಪ್ರತಿದಿನ ಕಣ್ಣೀರು.. ಪ್ರತಿದಿನ ಯಾರೋ ಒಬ್ಬರ ಜೀವನದ ಕೊನೆಯ ಅಧ್ಯಾಯ.. ಈ ಎಲ್ಲವನ್ನು ಮನಸ್ಸಿನೊಳಗೆ ಹೊತ್ತುಕೊಂಡೇ ವನಜಕ್ಕ ಅವರು ತಮ್ಮ ಕರ್ತವ್ಯವನ್ನು ದಿಟ್ಟವಾಗಿ ನಿರ್ವಹಿಸುತ್ತಾರೆ. ಪುರುಷರೇ ಹೆಚ್ಚಾಗಿ ನಿರ್ವಹಿಸುವ ಈ ಕ್ಷೇತ್ರದಲ್ಲಿ ಮಹಿಳೆಯಾಗಿ ಹೆಜ್ಜೆಯಿಡುವುದು ಸುಲಭವಾಗಿರಲಿಲ್ಲ. ಸಮಾಜದ ಅನೇಕ ಪ್ರಶ್ನೆಗಳು, ಮೂಢನಂಬಿಕೆಗಳು, ತಿರಸ್ಕಾರಗಳ ನಡುವೆಯೂ ಅವರು ಹಿಂದೆ ಸರಿಯಲಿಲ್ಲ. ಇಂದು ಅವರ ಬದುಕೇ ಅನೇಕ ಮಹಿಳೆಯರಿಗೆ ಧೈರ್ಯದ ಸಂಕೇತವಾಗಿದೆ. 77ರ ಹರೆಯದಲ್ಲಿಯೂ ವಿಶ್ರಾಂತಿಗೆ ಒತ್ತು ನೀಡದೆ, ಅಗತ್ಯವಿರುವಾಗ ಅಂತಿಮ ಸೇವೆಗೆ ಧಾವಿಸುವ ಅವರ ಮನೋಭಾವ ಅನೇಕರಿಗೆ ಪ್ರೇರಣೆಯಾಗಿದೆ.

 




Ads on article

Advertise in articles 1

advertising articles 2

Advertise under the article