ಉಡುಪಿ ವೈದ್ಯೆ ಡಾ.ರಾಜಲಕ್ಷ್ಮಿ ಅವರ "ವಾತ್ಸಲ್ಯದ ಒಸಗೆ" ಕೃತಿಗೆ ಪ್ರತಿಷ್ಠಿತ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ
Saturday, July 18, 2026
ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿರುವ ಉಡುಪಿಯ ವಾತ್ಸಲ್ಯ ಕ್ಲಿನಿಕ್‌ನ ಡಾ. ರಾಜಲಕ್ಷ್ಮಿ ಅವರ "ವಾತ್ಸಲ್ಯದ ಒಸಗೆ- ಮಹಿಳಾ ಆರೋಗ್ಯ ಸಂಗಾತಿ" ಕೃತಿಯು ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿಯು ನೀಡುವ "ಡಾ. ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿ 2025-26" ಕ್ಕೆ ಈ ಕೃತಿ ಆಯ್ಕೆಯಾಗಿದೆ.
ಐಎಂಎ ಉಡುಪಿ ಕರಾವಳಿ ಘಟಕದ ಪೂರ್ವಾಧ್ಯಕ್ಷೆಯಾಗಿರುವ ಡಾ. ರಾಜಲಕ್ಷ್ಮಿ ಅವರು ತಮ್ಮ ವೈದ್ಯಕೀಯ ಅನುಭವಗಳ ಆಧಾರದಲ್ಲಿ ರೋಗಿಗಳ ಬದುಕು, ಭಾವನೆಗಳು, ಮಹಿಳೆಯರ ಆರೋಗ್ಯ ಸಮಸ್ಯೆಗಳು ಹಾಗೂ ಮಾನವೀಯ ಸಂಬಂಧಗಳ ಕುರಿತು ಈ ಕೃತಿಯಲ್ಲಿ ಮನಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಓದುಗರೊಂದಿಗೆ ಭಾವನಾತ್ಮಕ ಸಂಪರ್ಕ ಬೆಸೆಯುವ ಈ ಕೃತಿಗೆ ಪ್ರಶಂಸೆ ವ್ಯಕ್ತವಾಗಿದೆ.
ಆಗಸ್ಟ್ 23 ಮತ್ತು 24ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ ನಡೆಯಲಿರುವ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್ ಹನಗವಾಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.