5.20 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ, ಇಬ್ಬರ ಬಂಧನ
Friday, July 17, 2026
ಮಂಗಳೂರು ಸಿಸಿಬಿ ಪೊಲೀಸರು ಬಾಗಲಕೋಟೆಯಲ್ಲಿ ಕಾರ್ಯಾಚರಣೆ ನಡೆಸಿ, ಬೆಂಗಳೂರು, ಮಂಗಳೂರು ಹಾಗೂ ಕೇರಳಕ್ಕೆ ಸಾಗಾಟಕ್ಕೆ ಸಿದ್ಧವಾಗಿದ್ದ 5.196 ಕೆಜಿ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಿ, ಬೆಳ್ತಂಗಡಿ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಪ್ತಿಯಾದ ಡ್ರಗ್ಸ್ ಮೌಲ್ಯ ಸುಮಾರು 5.20 ಕೋಟಿ ರೂ. ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಬಂಧಿತರನ್ನು ಮುಹಮ್ಮದ್ ಅಲ್ಫಾಝ್ ಹಾಗೂ ಮುಹಮ್ಮದ್ ಮುಸ್ತಫ ಎಂದು ಗುರುತಿಸಲಾಗಿದ್ದು, ಇವರಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ.
ಇದೇ ವೇಳೆ, ಮಂಗಳೂರು ನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಳೆದ 10 ದಿನಗಳಿಂದ ತಪಾಸಣೆ ನಡೆಯುತ್ತಿದ್ದು, ಅಕ್ರಮವಾಗಿ ಕೆಲಸಕ್ಕೆ ಕರೆತಂದವರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ. ಕಾರ್ಮಿಕರನ್ನು ನೇಮಕ ಮಾಡುವ ಮುನ್ನ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸುವಂತೆ ಉದ್ಯಮಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ.