-->
ರಾಮ ಮಂದಿರ ದೇಣಿಗೆ, ಹುಂಡಿ ಕಳವು ಆರೋಪ: ಪಾರದರ್ಶಕ ತನಿಖೆಗೆ ವಿನಯಕುಮಾರ್ ಸೊರಕೆ ಆಗ್ರಹ

ರಾಮ ಮಂದಿರ ದೇಣಿಗೆ, ಹುಂಡಿ ಕಳವು ಆರೋಪ: ಪಾರದರ್ಶಕ ತನಿಖೆಗೆ ವಿನಯಕುಮಾರ್ ಸೊರಕೆ ಆಗ್ರಹ


ರಾಮ ಮಂದಿರ ದೇಣಿಗೆ ಸಂಗ್ರಹ, ಹುಂಡಿ ಕಳವು ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಗಳ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರದ ಹೆಸರಿನಲ್ಲಿ ಭಕ್ತರಿಂದ ಸಂಗ್ರಹಿಸಲಾದ ದೇಣಿಗೆಯ ಸಂಪೂರ್ಣ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ಆರೋಪಗಳ ಬಗ್ಗೆ ಸ್ಪಷ್ಟತೆ ಅಗತ್ಯವಿದೆ ಎಂದು ಹೇಳಿದರು.

ರಾಮನ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲಾಗಿದೆ. ಮನೆ ಮನೆಗೆ ಇಟ್ಟಿಗೆ ನೀಡಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡು ಚುನಾವಣೆ ಎದುರಿಸಲಾಗಿದೆ. ಆದರೆ ಮಂದಿರಕ್ಕಾಗಿ ಸಂಗ್ರಹವಾದ ಹಣದ ಲೆಕ್ಕಪತ್ರದ ಬಗ್ಗೆ ಹಲವು ಪ್ರಶ್ನೆಗಳು ಉಳಿದಿವೆ ಎಂದು ಅವರು ಆರೋಪಿಸಿದರು.

ಮಂದಿರ ನಿರ್ಮಾಣದ ಸಂದರ್ಭದಲ್ಲಿ ಭೂ ವ್ಯವಹಾರ ಹಾಗೂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳ ಬಗ್ಗೆ ಟ್ರಸ್ಟ್ ಸ್ಪಷ್ಟನೆ ನೀಡಬೇಕು. ಭಕ್ತರು ನೀಡಿದ ದೇಣಿಗೆ, ಚಿನ್ನ ಹಾಗೂ ಇತರ ಸಂಪನ್ಮೂಲಗಳ ನಿರ್ವಹಣೆ ಕುರಿತು ಸಂಪೂರ್ಣ ಮಾಹಿತಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಮಂದಿರವನ್ನು ಹೊರಗಿಡಿರುವುದು, ಸಿಸಿಟಿವಿ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳು ಹಾಗೂ ಕಟ್ಟಡದ ಸುರಕ್ಷತೆ ಕುರಿತು ವ್ಯಕ್ತವಾಗಿರುವ ಆತಂಕಗಳ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಹೇಳಿದರು.

ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಾಮಾನ್ಯ ತನಿಖೆಗಿಂತ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿದರೆ ಮಾತ್ರ ಸಂಪೂರ್ಣ ಪಾರದರ್ಶಕತೆ ಸಾಧ್ಯವಾಗುತ್ತದೆ. ತಪ್ಪಿತಸ್ಥರು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿನಯಕುಮಾರ್ ಸೊರಕೆ ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ವಿಚಾರಗಳ ಕುರಿತು ಮಾತನಾಡುತ್ತಿದ್ದರೂ ರಾಮ ಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಮೌನ ವಹಿಸಿದ್ದಾರೆ ಎಂದು ಅವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ಸುಕುಮಾರ್ ವೈ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article