ಮಾಳ ಘಾಟ್‌ನಲ್ಲಿ ಸರಣಿ ಅಪಘಾತ: ಡೀಸೆಲ್ ಸೋರಿಕೆಯಿಂದ ಅವಘಡ
Monday, July 20, 2026
ಕಾರುಗಳೆರಡು ಸರಣಿ ಅಪಘಾತಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ–169ರ ಚಿಕ್ಕಮಗಳೂರು–ಉಡುಪಿ ಗಡಿಭಾಗದ ಮಾಳ ಘಾಟ್‌ನಲ್ಲಿ ಸೋಮವಾರ ನಡೆದಿದೆ.
ರಸ್ತೆ ಮೇಲೆ ಡೀಸೆಲ್ ಸೋರಿಕೆಯಾಗಿದ್ದರಿಂದ ಎರಡು ಕಾರುಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಳ ಘಾಟ್‌ನಲ್ಲಿ ಟಿಪ್ಪರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಡೀಸೆಲ್ ಸೋರಿಕೆಯಾಯಿತು. ಇದರಿಂದ ರಸ್ತೆ ಜಾರುವಂತಾಗಿದ್ದು, ಬಳಿಕ ಅದೇ ಮಾರ್ಗದಲ್ಲಿ ಬಂದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದವು. ಅಪಘಾತದ ತೀವ್ರತೆಗೆ ಒಂದು ಕಾರು ಪಲ್ಟಿಯಾಯಿತು. ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಮೇಲೆ ಮರಳು ಹಾಕಿ ಡೀಸೆಲ್ ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.
.jpeg)
.jpeg)