-->
"ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ": ಹೈಕೋರ್ಟ್ ಕಠಿಣ ಸಂದೇಶ

"ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ": ಹೈಕೋರ್ಟ್ ಕಠಿಣ ಸಂದೇಶ


ಯುಕೆಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಆರೋಪ ಎದುರಿಸುತ್ತಿರುವ ಶಿಕ್ಷಕಿಯ ವಿರುದ್ಧದ ಕ್ರಿಮಿನಲ್ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, "ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ" ಎಂದು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕಿ ಸಿಸ್ಟರ್ ಆಶಾ ಕ್ರಾಸ್ಟಾ ಅವರು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, "ಶಿಕ್ಷಕಿ ಏಕೆ ಮಗುವನ್ನು ಹೊಡೆದರು?" ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ವಕೀಲರು ಆರೋಪವನ್ನು ನಿರಾಕರಿಸಿದಾಗ, ನ್ಯಾಯಮೂರ್ತಿಗಳು, "ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ. ಇಂತಹ ನಡೆಗಳನ್ನು ನ್ಯಾಯಾಲಯ ಸಹಿಸುವುದಿಲ್ಲ" ಎಂದು ಕಠಿಣವಾಗಿ ಹೇಳಿದರು.

ನಂತರ ಶಿಕ್ಷಕಿಯ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ಮಾಡಿದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಜೊತೆಗೆ, ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಹಾಗೂ ದೂರುದಾರೆಯಾದ ವಿದ್ಯಾರ್ಥಿನಿಯ ತಾಯಿ ಶಫ್ರೀನಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಯ ಮುಂದಿನ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ವಿವರಗಳ ಪ್ರಕಾರ, ವಿದ್ಯಾರ್ಥಿನಿಯ ತಾಯಿ ಶಫ್ರೀನಾ ಅವರು 2026ರ ಜನವರಿ 31ರಂದು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಮ್ಮ ಆರು ವರ್ಷದ ಮಗಳು ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದು, ಈ ಹಿಂದೆಯೂ ಶಿಕ್ಷಕಿ ಆಶಾ ಕ್ರಾಸ್ಟಾ ತರಗತಿಯಲ್ಲಿ ಮಗುವಿಗೆ ಹೊಡೆದಿದ್ದರು. ಆ ವೇಳೆ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಿದ್ದರು. ಮುಂದೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಶಿಕ್ಷಕಿಯೂ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, 2026ರ ಜನವರಿ 30ರಂದು ಮತ್ತೆ ಮಗುವಿಗೆ ಕೋಲಿನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಶಿಕ್ಷಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಫ್ರೀನಾ ಮನವಿ ಮಾಡಿದ್ದರು.

ಈ ದೂರಿನ ಆಧಾರದಲ್ಲಿ ಸುರತ್ಕಲ್ ಪೊಲೀಸರು, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 118(1) (ದೈಹಿಕ ನೋವು ಅಥವಾ ಗಾಯ ಉಂಟುಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಕರಣ ಪ್ರಸ್ತುತ ಮಂಗಳೂರಿನ 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. 

Ads on article

Advertise in articles 1

advertising articles 2

Advertise under the article