ಮಲ್ಪೆ ಬಂದರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಎಚ್ಚರಿಕೆ
ಮಲ್ಪೆ ಮೀನುಗಾರಿಕಾ ಬಂದರಿನ ಸಮರ್ಪಕ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ಬಂದರು ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೀನುಗಾರರ ಸಂಘದ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಲ್ಪೆ ಬಂದರಿನ ಅವ್ಯವಸ್ಥೆ, ಸ್ವಚ್ಛತೆಯ ಕೊರತೆ ಹಾಗೂ ನಿರ್ವಹಣೆಯಲ್ಲಿ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮೀನುಗಾರರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳು ಪ್ರಕಟವಾಗುತ್ತಿವೆ. ಹೀಗಾಗಿ ಮೀನುಗಾರಿಕೆ ಹಾಗೂ ಬಂದರು ಇಲಾಖೆ ಅಧಿಕಾರಿಗಳು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಂದರು ನಿರ್ವಹಣೆಯ ಟೆಂಡರ್ ಅವಧಿ ಮುಗಿದಿದ್ದರೂ ಹೊಸ ಟೆಂಡರ್ ಆಹ್ವಾನಿಸದಿರುವುದು, ಬಂದರಿನ ಸ್ವಚ್ಛತೆ, ಬೀದಿ ದೀಪಗಳ ಕೊರತೆ ಹಾಗೂ ಭದ್ರತೆಗಾಗಿ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಬಂದರು ಇಲಾಖೆಯ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸುವಂತೆ ಈಗಾಗಲೇ ನಿರ್ಧಾರ ಕೈಗೊಂಡಿದ್ದರೂ, ನಿಯಮ ಮೀರಿ ಖಾಸಗಿ ವ್ಯಕ್ತಿಗಳಿಗೆ ಇತರ ಉದ್ದೇಶಗಳಿಗೆ ನೀಡುತ್ತಿರುವ ಬಗ್ಗೆ ಮೀನುಗಾರ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಅಗತ್ಯವಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ, ಬಂದರು ಇಲಾಖೆಯಿಂದ ನಿರ್ಮಾಣವಾಗಲಿರುವ ನೂತನ ಪ್ರವೇಶ ದ್ವಾರದ ವಿನ್ಯಾಸವನ್ನು ತಕ್ಷಣ ಅಂತಿಮಗೊಳಿಸಿ ಮೀನುಗಾರಿಕಾ ಋತು ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು. ಹೆದ್ದಾರಿ ಕಾಮಗಾರಿಗೆ ಗುರುತಿಸಲಾಗಿರುವ ಬಂದರು ಇಲಾಖೆಯ ಜಾಗದಲ್ಲಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ಕಾಮಗಾರಿ ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಾಪುಟೋಟದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಬಳಕೆಗೆ ಯೋಗ್ಯವಾಗಿಲ್ಲ ಎಂದು ತಿಳಿಸಿದ ಅವರು, ಮಲ್ಪೆ ಮೀನುಗಾರರ ಸಂಘದ ಸಲಹೆಯಂತೆ ಸ್ಥಳೀಯ ಸಹಕಾರಿ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ ನೀಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಮಲ್ಪೆ ಬಂದರಿನ ಅಗ್ನಿಶಾಮಕ ದಳ ಸದಾ ಸನ್ನದ್ಧವಾಗಿರಬೇಕು ಹಾಗೂ ಅಗತ್ಯ ವಾಹನಗಳ ಲಭ್ಯತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕರಾವಳಿ ಭಾಗದ ಮಲ್ಪೆ, ತೊಟ್ಟಂ ಮತ್ತು ಗುಜ್ಜರಬೆಟ್ಟು ಪ್ರದೇಶಗಳಲ್ಲಿ ಕಡಲ್ಕೊರೆತ ತಡೆ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ತಿಳಿಸಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಮೀನುಗಾರಿಕಾ ಯೋಜನೆಗಳ ಕುರಿತು ಮೀನುಗಾರರಿಗೆ ಸಮರ್ಪಕ ಮಾಹಿತಿ ತಲುಪಿಸಲು ಇಲಾಖೆ ಆದ್ಯತೆ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಅಧಿಕಾರಿ ಸವಿತಾ ಖಾದ್ರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.
.jpeg)