-->
ಆಗುಂಬೆಯಲ್ಲಿ ಅಪರೂಪದ 'ಕನಿ ಮರನಂಡು' ಪತ್ತೆ: ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹೊಸ ಸೇರ್ಪಡೆ (Video)

ಆಗುಂಬೆಯಲ್ಲಿ ಅಪರೂಪದ 'ಕನಿ ಮರನಂಡು' ಪತ್ತೆ: ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹೊಸ ಸೇರ್ಪಡೆ (Video)


ಅಪರೂಪದ ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ 'ಕನಿ ಮರನಂಡು' ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಪತ್ತೆಯಾಗಿದೆ.

ಇದುವರೆಗೆ ಈ ಅಪರೂಪದ ಏಡಿ ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಿ ಮಾತ್ರ ದಾಖಲಾಗಿತ್ತು. ಇದೀಗ ಆಗುಂಬೆಯಲ್ಲಿಯೂ ಇದರ ಅಸ್ತಿತ್ವ ದೃಢಪಟ್ಟಿರುವುದು ಜೀವವೈವಿಧ್ಯ ಸಂಶೋಧನೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ಅವರ ತಂಡ ಈ ಅಪರೂಪದ ಪ್ರಭೇದವನ್ನು ದಾಖಲಿಸಿದೆ. 2023ರಲ್ಲಿ ಈ ಏಡಿ ನೆಲದ ಮೇಲೆ ಕಂಡುಬಂದಿದ್ದರೆ, 2025ರಲ್ಲಿ ಮರದ ಕಾಂಡದಲ್ಲಿರುವ ನೀರು ತುಂಬಿದ ಕುಳಿಯಲ್ಲಿ ಪತ್ತೆಯಾಗಿರುವುದು ಸಂಶೋಧಕರಲ್ಲಿ ಹೊಸ ಕುತೂಹಲ ಮೂಡಿಸಿದೆ.

ಉದ್ದ ಕಾಲುಗಳು, ನೀಲಿಕಪ್ಪು ಬಣ್ಣದ ದೇಹ ಹಾಗೂ ಹಳದಿ-ಕಿತ್ತಳೆ ಬಣ್ಣದ ಕೊಕ್ಕುಗಳು ಈ ಏಡಿಯ ಪ್ರಮುಖ ಲಕ್ಷಣಗಳಾಗಿವೆ. ಮರವಾಸಿ ಎಂದು ಗುರುತಿಸಲ್ಪಟ್ಟಿದ್ದ ಈ ಏಡಿ ನೆಲದ ಮೇಲೂ ಸಂಚರಿಸುತ್ತಿರುವುದು ಅದರ ವರ್ತನೆ ಮತ್ತು ಜೀವನಶೈಲಿಯ ಕುರಿತು ಹೊಸ ಅಧ್ಯಯನಗಳಿಗೆ ದಾರಿ ಮಾಡಿಕೊಟ್ಟಿದೆ.

ನಿತ್ಯಹರಿದ್ವರ್ಣ ಕಾಡಿನ ಮರಗಳಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ವಾಸಿಸುವ ಈ ಅಪರೂಪದ ಜೀವಿಯ ಪತ್ತೆ, ಪಶ್ಚಿಮ ಘಟ್ಟದ ಸಮೃದ್ಧ ಜೀವವೈವಿಧ್ಯಕ್ಕೆ ಮತ್ತೊಂದು ಮಹತ್ವದ ದಾಖಲೆಯಾಗಿದೆ. ಈ ಜೀವಿಯ ಪರಿಸರ, ಜೀವನಚಕ್ರ ಹಾಗೂ ಸಂರಕ್ಷಣೆಯ ಕುರಿತು ಇನ್ನಷ್ಟು ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.



Ads on article

Advertise in articles 1

advertising articles 2

Advertise under the article