ಕಟಪಾಡಿಯ ಅಚ್ಚಡ ಪ್ರದೇಶದಲ್ಲಿ ಬೀದಿನಾಯಿ ಹಾವಳಿ: ಐದು ಆಡುಗಳು ಬಲಿ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಅಚ್ಚಡ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನೆಯಲ್ಲಿ ಸಾಕಿದ್ದ ಐದು ಆಡುಗಳನ್ನು ಬೀದಿನಾಯಿಗಳ ಗುಂಪು ಕಚ್ಚಿಕೊಂದ ಘಟನೆ ನಡೆದಿದೆ.
ಅಚ್ಚಡ ನಿವಾಸಿ ಹಾಗೂ ನಿವೃತ್ತ ಶಿಕ್ಷಕರಾದ ವಿಠಲ ಅವರ ಮನೆಯಲ್ಲಿ ಸಾಕಿದ್ದ ಆಡುಗಳ ಮೇಲೆ ರಾತ್ರಿ ವೇಳೆ ಬೀದಿನಾಯಿಗಳ ಗುಂಪು ದಾಳಿ ನಡೆಸಿದೆ. ದಾಳಿಯಲ್ಲಿ ಐದು ಆಡುಗಳು ಸಾವನ್ನಪ್ಪಿದ್ದು, ಕೆಲವು ಆಡುಗಳನ್ನು ಕಚ್ಚಿಕೊಂಡು ಎಳೆದೊಯ್ದಿರುವುದಾಗಿ ತಿಳಿದುಬಂದಿದೆ. ಇದರಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದೆ.
ಇದೇ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆಯೂ ಬೀದಿನಾಯಿಗಳು ಸಾಕು ಕೋಳಿಗಳು ಹಾಗೂ ಟರ್ಕಿ ಕೋಳಿಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ಘಟನೆ ನಡೆದಿತ್ತು. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಚ್ಚಡ ಪರಿಸರದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ವಿಶೇಷವಾಗಿ ಹಗಲು ವೇಳೆಯಲ್ಲೇ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆ ಬಗ್ಗೆ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಲವು ಬಾರಿ ಕಟಪಾಡಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಿ ಸಾರ್ವಜನಿಕರ ಹಾಗೂ ಸಾಕುಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.