-->
 ಗೋಗ್ರಾಸ ಸೇವೆಯ ಎಲ್ಲ ಲೆಕ್ಕಪತ್ರ ಪರಿಶೀಲನೆಗೆ ಸಿದ್ಧ:ವಂಚನೆ ಆರೋಪ ನಿರಾಧಾರ: ಶಶಿಧರ ಭಟ್ ಸ್ಪಷ್ಟನೆ

ಗೋಗ್ರಾಸ ಸೇವೆಯ ಎಲ್ಲ ಲೆಕ್ಕಪತ್ರ ಪರಿಶೀಲನೆಗೆ ಸಿದ್ಧ:ವಂಚನೆ ಆರೋಪ ನಿರಾಧಾರ: ಶಶಿಧರ ಭಟ್ ಸ್ಪಷ್ಟನೆ


ಉಡುಪಿ ಶ್ರೀ ಗೋವರ್ಧನ ಗಿರಿ ಟ್ರಸ್ಟ್ ಮೂಲಕ ನೀಲಾವರ ಹಾಗೂ ಕೊಡವೂರು ಗೋಶಾಲೆಗಳ ಕುರಿತು ಕೇಳಿ ಬಂದಿರುವ ಆರೋಪಗಳಿಗೆ ಶಶಿಧರ ಭಟ್ ಹಾಗೂ ನೀಲಾವರ ಗೋಗ್ರಾಸ ಸೇವಾ ತಂಡವು ಸ್ಪಷ್ಟೀಕರಣ ನೀಡಿದೆ.


ನೀಲಾವರ ಗೋಗ್ರಾಸ ಸೇವಾ ತಂಡವು "ಗೋ ಸೇವಾ ಪರಮೋ ಧರ್ಮಃ" ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಕರ ತಂಡವಾಗಿದ್ದು, ನೀಲಾವರ ಹಾಗೂ ಕೊಡವೂರು ಗೋಶಾಲೆಗಳಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ನೆರವು ನೀಡುವುದು, ಸಾರ್ವಜನಿಕರನ್ನು ಗೋಸೇವೆಯತ್ತ ಪ್ರೇರೇಪಿಸುವುದು ಹಾಗೂ ಗೋಶಾಲೆಗಳ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ತಂಡವನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಂಡದ ಚಟುವಟಿಕೆಗಳನ್ನು ಆರಂಭಿಸುವ ಮುನ್ನವೇ ಪರಮಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಅನುಮತಿ ಹಾಗೂ ಆಶೀರ್ವಾದ ಪಡೆಯಲಾಗಿದ್ದು, ಅವರ ಮಾರ್ಗದರ್ಶನದಲ್ಲಿಯೇ ಎಲ್ಲಾ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ. ಕೈಗೊಂಡಿರುವ ಪ್ರತಿಯೊಂದು ಕಾರ್ಯದ ವಿವರಗಳನ್ನು ಕಾಲಕಾಲಕ್ಕೆ ಅವರಿಗೆ ಸಲ್ಲಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಲಾಗಿದೆ.

ಗೋಗ್ರಾಸ ಸೇವೆಗಾಗಿ ಸಂಗ್ರಹಿಸಲಾದ ಪ್ರತಿಯೊಂದು ರೂಪಾಯಿಗೂ ಸಮರ್ಪಕ ಲೆಕ್ಕಪತ್ರವನ್ನು ನಿರ್ವಹಿಸಲಾಗಿದ್ದು, ಗೋಶಾಲೆಗೆ ಅಗತ್ಯವಾದ ಪಾತ್ರೆಗಳು, ಹಿಂಡಿ ಹಾಗೂ ಇತರ ಸೇವಾ ಕಾರ್ಯಗಳಿಗೆ ಮಾತ್ರ ವೆಚ್ಚ ಮಾಡಲಾಗಿದೆ. ಉಳಿದ ಮೊತ್ತವನ್ನು ಈಗಾಗಲೇ ಶ್ರೀ ಗೋವರ್ಧನ ಗಿರಿ ಟ್ರಸ್ಟ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ.

ತಂಡದ ಸೇವಾ ಚಟುವಟಿಕೆಗಳಿಗೆ ಸಾರ್ವಜನಿಕರು ಹಾಗೂ ಗೋಪ್ರಿಯರಿಂದ ಉತ್ತಮ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ, ಕೆಲವು ಸ್ಥಾಪಿತ ಹಿತಾಸಕ್ತಿಗಳು ವಿನಾಕಾರಣ ಅಪಪ್ರಚಾರ ನಡೆಸಿ, ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದಾರೆ. ಅಲ್ಲದೆ, ಶಶಿಧರ ಭಟ್ ಪಾಲುದಾರರಾಗಿರುವ ವ್ಯವಹಾರಿಕ ಸಂಸ್ಥೆಯ ಹೆಸರನ್ನೂ ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

ನಾನು ಹಾಗೂ ನಮ್ಮ ಗೋಗ್ರಾಸ ಸೇವಾ ತಂಡವು ಪೇಜಾವರ ಮಠಕ್ಕೆ, ಪರಮಪೂಜ್ಯ ಪೇಜಾವರ ಶ್ರೀಗಳಿಗೆ ಅಥವಾ ನೀಲಾವರ ಹಾಗೂ ಕೊಡವೂರು ಗೋಶಾಲೆಗಳಿಗೆ ಯಾವುದೇ ರೀತಿಯ ಮೋಸ, ವಂಚನೆ ಅಥವಾ ದ್ರೋಹ ಎಸಗಿಲ್ಲ. ಗೋಸೇವೆಯನ್ನೇ ನಮ್ಮ ಧ್ಯೇಯವಾಗಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇವೆ. ಮುಂದೆಯೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಆರಾಧನೆ ಎಂಬ ಭಾವನೆಯೊಂದಿಗೆ ಗೋಸೇವೆಯನ್ನು ಮುಂದುವರಿಸುತ್ತೇವೆ ಎಂದು ಶಶಿಧರ ಭಟ್ ತಿಳಿಸಿದ್ದಾರೆ.

ನಮ್ಮ ಸೇವಾ ಕಾರ್ಯ, ಲೆಕ್ಕಪತ್ರ ಹಾಗೂ ಪಾರದರ್ಶಕತೆಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಸಮ್ಮುಖದಲ್ಲಿ ವಿವರಿಸಲು ಹಾಗೂ ಪರಿಶೀಲನೆಗೆ ಒಳಪಡಿಸಲು ನಾವು ಸದಾ ಸಿದ್ಧರಾಗಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article