ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಡುಗೊರೆ ನೀಡಿದ ಮಣಿಪಾಲ ಲಯನ್ಸ್ ಕ್ಲಬ್
Tuesday, July 07, 2026
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಅವರು ಬಯಸಿದ್ದ ಇಚ್ಛಿತ ಉಡುಗೊರೆಗಳನ್ನು ಮಣಿಪಾಲ ಲಯನ್ಸ್ ಕ್ಲಬ್ ವತಿಯಿಂದ ಮಂಗಳವಾರ ವಿತರಿಸಲಾಯಿತು.
ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವ ಹಾಗೂ ಅವರಿಗೆ ಮಾನಸಿಕ ಧೈರ್ಯ ತುಂಬುವ ಉದ್ದೇಶದಿಂದ ಈ ವಿಶೇಷ ಸೇವಾ ಕಾರ್ಯಕ್ರಮವನ್ನು ಮಣಿಪಾಲ ಲಯನ್ಸ್ ಕ್ಲಬ್ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಡಿ ಮಕ್ಕಳ ಇಚ್ಛೆಯಂತೆ ಆಟಿಕೆಗಳು, ಪುಸ್ತಕಗಳು, ಶಾಲಾ ಸಾಮಗ್ರಿಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಡಾ. ವಾಸುದೇವ ಭಟ್ ಉಪಸ್ಥಿತರಿದ್ದು, ಲಯನ್ಸ್ ಕ್ಲಬ್‌ನ ಈ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಚಿಕಿತ್ಸೆ ಎದುರಿಸುವ ಧೈರ್ಯವನ್ನೂ ತುಂಬುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಮಣಿಪಾಲ ಲಯನ್ಸ್ ಕ್ಲಬ್ ಸದಸ್ಯರಾದ ನಿಶಾಂತ್ ಭಟ್, ಡಾ. ಗಣೇಶ್ ಪೈ, ಸುರೇಶ್ ಪ್ರಭು ಹಾಗೂ ರಮೇಶ್ ಕಿಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ದಾನಿಗಳಾದ ರೋಹಿತ್ ಪ್ರಭು, ಪ್ರಿಯಾ ಪ್ರಭು, ಶ್ರೇಯ, ರಿತಿಕ್, ಸುಷ್ಮಾ ಪ್ರಭು ಹಾಗೂ ದೀಪಾ ಪೈ ಪ್ರಭು ಅವರು ಉಪಸ್ಥಿತರಿದ್ದು, ಮಕ್ಕಳಿಗೆ ಅವರು ಬಯಸಿದ್ದ ಉಡುಗೊರೆಗಳನ್ನು ವಿತರಿಸಿ ಸಂತಸ ಹಂಚಿಕೊಂಡರು.
ಮಕ್ಕಳ ಮುಖದಲ್ಲಿ ಮೂಡಿದ ನಗು ಹಾಗೂ ಸಂತೋಷದ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ಸಮಾಜಮುಖಿ ಸೇವೆಯ ಭಾಗವಾಗಿ ಮಣಿಪಾಲ ಲಯನ್ಸ್ ಕ್ಲಬ್ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಸ್ಥಳೀಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
.jpeg)
