-->
ಪಿಂಚಣಿ ಆದಾಯ ಮಿತಿ ರೂ.1.20 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರಕ್ಕೆ ಹರೀಶ್ ಕಿಣಿ ಅಭಿನಂದನೆ

ಪಿಂಚಣಿ ಆದಾಯ ಮಿತಿ ರೂ.1.20 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರಕ್ಕೆ ಹರೀಶ್ ಕಿಣಿ ಅಭಿನಂದನೆ


ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುವ ಫಲಾನುಭವಿಗಳ ಆದಾಯ ಮಿತಿಯನ್ನು ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಅಸಹಾಯಕರು, ಅಶಕ್ತರು, ವಿಧವೆಯರು ಹಾಗೂ ಅಂಗವಿಕಲರಿಗಾಗಿ ಕಂದಾಯ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಪಿಂಚಣಿ ಯೋಜನೆ, ವಿಕಲಚೇತನರ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಹಾಗೂ ಮೈತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಕ್ರಮದಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಹಾಗೂ ಅಂತ್ಯಸಂಸ್ಕಾರ ಸಹಾಯ ಯೋಜನೆಗಳಂತಹ ಒಂದು ಬಾರಿ ಸೌಲಭ್ಯ ದೊರೆಯುವ ಯೋಜನೆಗಳ ಆದಾಯ ಮಿತಿಯನ್ನು ರೂ.32 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿರುವುದಕ್ಕೂ ಹರೀಶ್ ಕಿಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ತಿಂಗಳಿನಿಂದ ಫಲಾನುಭವಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಪರಿಶೀಲನಾ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ವಾರ್ಷಿಕ ಆದಾಯ ಮಿತಿ ರೂ.1.20 ಲಕ್ಷದೊಳಗಿನ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯವನ್ನು ಕೂಡಲೇ ದೊರಕಿಸಿಕೊಡಬೇಕು ಎಂದು ಅವರು ಕಂದಾಯ ಸಚಿವ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಇದೇ ವೇಳೆ, ಕೇಂದ್ರ ಸರ್ಕಾರದ ಸೂಚನೆಯಂತೆ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು, ಈಗಾಗಲೇ ಹಲವಾರು ಕಾರ್ಡ್‌ಗಳು ರದ್ದಾಗಿವೆ. ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದ ಮಾನದಂಡಗಳನ್ನು ಮರುಪರಿಶೀಲಿಸಿ, ಪ್ರಸ್ತುತ ಇರುವ ಆದಾಯ ಮಿತಿಯನ್ನು ಹೆಚ್ಚಿಸಬೇಕು ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಹರೀಶ್ ಕಿಣಿ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article