26 ಸಾವಿರಕ್ಕೂ ಅಧಿಕ ಪ್ರಾಣಿಗಳ ರಕ್ಷಕ ತೌಸೀಫ್ ಅಹ್ಮದ್‌ಗೆ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ
Wednesday, August 19, 2026
ಕಳೆದ 15 ವರ್ಷಗಳಿಂದ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಣಿ ರಕ್ಷಕ ತೌಸೀಫ್ ಅಹ್ಮದ್ ಅವರಿಗೆ ಬೆಂಗಳೂರಿನ ‘ಸ್ವರ್ಣ ಭಾರತ ಫೌಂಡೇಶನ್’ ವತಿಯಿಂದ ‘ಅಸಾಧಾರಣ ಪ್ರಾಣಿ ರಕ್ಷಣೆ ಮತ್ತು ಕಲ್ಯಾಣ ಸೇವಾ ಪ್ರಶಸ್ತಿ–2026’ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತೌಸೀಫ್ ಅಹ್ಮದ್ ಅವರಿಗೆ ಈ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಾಣಿ ಕಲ್ಯಾಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆಗೆ ದೊರೆತ ಮೂರನೇ ರಾಷ್ಟ್ರೀಯ ಮಟ್ಟದ ಗೌರವ ಇದಾಗಿದೆ.
ತೌಸೀಫ್ ಅಹ್ಮದ್ ಅವರು ಕಳೆದ ಒಂದೂವರೆ ದಶಕದಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಬೀದಿ ಪ್ರದೇಶಗಳಿಂದ ಗಾಯಗೊಂಡ, ಅಸ್ವಸ್ಥ ಹಾಗೂ ಸಂಕಷ್ಟದಲ್ಲಿದ್ದ 26,000ಕ್ಕೂ ಅಧಿಕ ಪ್ರಾಣಿಗಳನ್ನು ರಕ್ಷಿಸಿ, ಅವುಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಆರೈಕೆ ಒದಗಿಸುವ ಮೂಲಕ ಮರುಜೀವ ನೀಡಿದ್ದಾರೆ.
ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಿ ಅವುಗಳ ರಕ್ಷಣೆ, ಚಿಕಿತ್ಸೆ ಮತ್ತು ಪುನರ್ವಸತಿಗೆ ನಿರಂತರವಾಗಿ ಶ್ರಮಿಸುತ್ತಿರುವ ತೌಸೀಫ್ ಅವರ ಮಾನವೀಯ ಸೇವೆಗೆ ಈಗಾಗಲೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ದೀರ್ಘಕಾಲದ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗೌರವಿಸಲಾಗಿದೆ.