ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ 398 ಗ್ರಾಂ ಚಿನ್ನದ ಕಳಶ ಸಮರ್ಪಣೆ
Friday, August 21, 2026
ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಟಿವಿಎಸ್ ಕಂಪನಿಯ ಚೇರ್ಮನ್ ಹಾಗೂ ಶ್ರೀರಂಗನಾಥಸ್ವಾಮಿಯ ಪರಮ ಭಕ್ತರಾದ ವೇಣು ಶ್ರೀನಿವಾಸನ್ ಅವರು ಸುಮಾರು 398 ಗ್ರಾಂ ತೂಕದ ಚಿನ್ನದ ಕಳಶವನ್ನು ಕೊಡುಗೆಯಾಗಿ ಸಮರ್ಪಿಸಿದ್ದಾರೆ.
ದೇವಾಲಯದ ಪ್ರಧಾನ ಅರ್ಚಕರಾದ ವಿಜಯಸಾರಥಿ, ಪ್ರಸನ್ನ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುನಾಗೇಂದ್ರದತ್ತ ಅವರ ಸಮ್ಮುಖದಲ್ಲಿ ಚಿನ್ನದ ಕಳಶವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಲಾಯಿತು.
ಶ್ರೀರಂಗನಾಥಸ್ವಾಮಿಯ ಮೇಲಿನ ಅಪಾರ ಭಕ್ತಿ ಹೊಂದಿರುವ ವೇಣು ಶ್ರೀನಿವಾಸನ್ ಅವರು ಸ್ವಾಮಿಯ ಪ್ರೇರಣೆಯಿಂದ ಈ ಸೇವೆಯನ್ನು ಕೈಗೊಂಡಿದ್ದಾರೆ ಎಂದು ವೈದಿಕರು ತಿಳಿಸಿದ್ದಾರೆ. ಚಿನ್ನದ ಕಳಶವನ್ನು ಸಮರ್ಪಿಸಿದ ಬಳಿಕ ಅವರು ಕೆಲ ತಾಸುಗಳ ಕಾಲ ಶ್ರೀ ಆದಿರಂಗನ ಸನ್ನಿಧಿಯಲ್ಲಿಯೇ ಇದ್ದು, ಭಕ್ತಿಯಿಂದ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದು ಪ್ರಾರ್ಥಿಸಿದರು.
ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಚಿನ್ನದ ಕಳಶ ಸಮರ್ಪಿಸಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.