-->
ಮುರಿದ ಬೆಂಚ್, ರಾಶಿ ಬಿದ್ದ ಇಂಟರ್‌ಲಾಕ್: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ

ಮುರಿದ ಬೆಂಚ್, ರಾಶಿ ಬಿದ್ದ ಇಂಟರ್‌ಲಾಕ್: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ


ಉಡುಪಿ ನಗರದ ಪ್ರಮುಖ ಸಾರ್ವಜನಿಕ ಸಾರಿಗೆ ಕೇಂದ್ರವಾಗಿರುವ ಸರ್ವಿಸ್ ಬಸ್ ನಿಲ್ದಾಣದಲ್ಲಿ ಅಭಿವೃದ್ದಿ ಕಾಮಗಾರಿಯನ್ನೇನೋ ನಡೆಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತಷ್ಟು ಅವ್ಯವಸ್ಥೆ ಕಂಡು ಬರುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.


ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಾಗಿ ಬಳಸಲಾಗಿದ್ದ ಇಂಟರ್‌ಲಾಕ್‌ಗಳನ್ನು ಕಾಮಗಾರಿ ಮುಗಿದ ಬಳಿಕ ತೆರವುಗೊಳಿಸದೆ ಕಳೆದ ಒಂದು ತಿಂಗಳಿಂದ ನಿಲ್ದಾಣದ ಆವರಣದಲ್ಲೇ ರಾಶಿ ಹಾಕಲಾಗಿದೆ. ನಿಲ್ದಾಣದ ಒಂದು ಭಾಗದಲ್ಲಿ ಅಲ್ಲಲ್ಲಿ ಬಿದ್ದಿರುವ ಇಂಟರ್‌ಲಾಕ್‌ಗಳಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುವುದರ ಜೊತೆಗೆ, ನಿಲ್ದಾಣದ ಅಂದ ಹಾಗೂ ಅಚ್ಚುಕಟ್ಟಾದ ನಿರ್ವಹಣೆಯ ಮೇಲೂ ಪ್ರಶ್ನೆ ಮೂಡಿದೆ.


ಪ್ರತಿದಿನ ನೂರಾರು ಪ್ರಯಾಣಿಕರು ಸಂಚರಿಸುವ ಈ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶದ ಸಮರ್ಪಕ ಬಳಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡ ನಂತರ ಉಳಿದಿರುವ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸದೆ ನಿಲ್ದಾಣದಲ್ಲೇ ರಾಶಿ ಹಾಕಲಾಗಿದೆ. ನಿಲ್ದಾಣದ ಒಂದು ಭಾಗದಲ್ಲಿ ಇಂಟರ್‌ಲಾಕ್‌ಗಳನ್ನು ಅಲ್ಲಲ್ಲಿ ರಾಶಿ ಹಾಕಲಾಗಿದೆ. ಸದ್ಯದ ಸ್ಥಿತಿ ನಿಲ್ದಾಣದ ಅಂದ ಹಾಗೂ ವ್ಯವಸ್ಥೆಗೆ ಧಕ್ಕೆಯುಂಟುಮಾಡುತ್ತಿದೆ.

ಇದರ ನಡುವೆ ಪ್ರಯಾಣಿಕರು ಕುಳಿತುಕೊಳ್ಳಲು ಅಳವಡಿಸಲಾಗಿದ್ದ ಬೆಂಚ್ ಮುರಿದುಹೋಗಿದ್ದು, ಅದನ್ನೂ ಅಲ್ಲಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ಮುರಿದ ಸಾಮಗ್ರಿಗಳನ್ನು ತೆರವುಗೊಳಿಸದೆ ಇಡುವುದು ನಿರ್ವಹಣೆಯ ನಿರ್ಲಕ್ಷ್ಯದ ಸಂಕೇತ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಕಾಮಗಾರಿ ನಡೆಸಿದ ಬಳಿಕ ಉಳಿದಿರುವ ಸಾಮಗ್ರಿಗಳನ್ನು ಸೂಕ್ತ ರೀತಿಯಲ್ಲಿ ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಲ್ದಾಣವನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ. ಆದರೆ ಇಂಟರ್‌ಲಾಕ್‌ಗಳ ರಾಶಿ ಹಾಗೂ ಮುರಿದ ಬೆಂಚ್‌ನ್ನು ಕಂಡರೆ ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಆರೋಪ ಕೇಳಿಬರುತ್ತಿದೆ.

ಕಾಮಗಾರಿ ಮುಗಿದರೂ ಅವ್ಯವಸ್ಥೆ ಮಾತ್ರ ಮುಗಿದಿಲ್ಲ ಎಂಬಂತಾಗಿದೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಪರಿಸ್ಥಿತಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಾಶಿ ಹಾಕಿರುವ ಇಂಟರ್‌ಲಾಕ್‌ಗಳನ್ನು ತೆರವುಗೊಳಿಸುವುದರ ಜೊತೆಗೆ ಮುರಿದ ಬೆಂಚ್‌ನ್ನು ದುರಸ್ತಿ ಅಥವಾ ತೆರವುಗೊಳಿಸಿ, ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಮುಖ ಪ್ರವಾಸಿ ನಗರವಾಗಿರುವ ಉಡುಪಿಯ ಬಸ್ ನಿಲ್ದಾಣಕ್ಕೆ ಪ್ರತಿದಿನ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಪ್ರಯಾಣಿಕರು ಆಗಮಿಸುತ್ತಾರೆ. ಇಂತಹ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ, ಸುರಕ್ಷತೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ. 

Ads on article

Advertise in articles 1

advertising articles 2

Advertise under the article