ಮಂಗಳೂರು ರೈಲ್ವೆ ಜಾಲ ಏಕೀಕರಣ: ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ: ಬಿಜೆಪಿ ಸಂತಸ
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲವನ್ನು ಸಂಪೂರ್ಣವಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದು ಕರಾವಳಿ ಜಿಲ್ಲೆಗಳ ಜನತೆಯ ಬಹುಕಾಲದ ಬೇಡಿಕೆಗೆ ದೊರೆತ ಮಹತ್ವದ ಜಯವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಸಂತಸ ವ್ಯಕ್ತಪಡಿಸಿದೆ.
ಮಂಗಳೂರು ಮಾತ್ರವಲ್ಲದೆ ಉಡುಪಿ ಸೇರಿದಂತೆ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರು ಮತ್ತು ಬಳಕೆದಾರರ ದೃಷ್ಟಿಯಿಂದಲೂ ಈ ನಿರ್ಧಾರ ಐತಿಹಾಸಿಕ ಹೆಜ್ಜೆಯಾಗಿದೆ. ರೈಲ್ವೆ ಜಾಲದ ಆಡಳಿತಾತ್ಮಕ ಗೊಂದಲಗಳು ನಿವಾರಣೆಯಾಗುವುದರೊಂದಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಲಿದೆ. ಪ್ರಯಾಣಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿ, ರೈಲ್ವೆ ಮೂಲಸೌಕರ್ಯಗಳ ವಿಸ್ತರಣೆ ಹಾಗೂ ಕರಾವಳಿ ಭಾಗದ ರೈಲು ಸಂಪರ್ಕದ ಅಭಿವೃದ್ಧಿಗೆ ಈ ಕ್ರಮ ವೇಗ ನೀಡಲಿದೆ ಎಂದು ಬಿಜೆಪಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆ ವಲಯದೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸುವ ಪ್ರಕ್ರಿಯೆಗೂ ಈ ನಿರ್ಧಾರ ಪೂರಕವಾಗಲಿದೆ ಎಂಬ ವಿಶ್ವಾಸವನ್ನು ಉಡುಪಿ ಜಿಲ್ಲಾ ಬಿಜೆಪಿ ವ್ಯಕ್ತಪಡಿಸಿದೆ.
ಜೂನ್ 2024ರಲ್ಲಿ ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಗಳೂರು, ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಂಸದರು ಮಂಗಳೂರು ರೈಲ್ವೆ ಜಾಲದ ಏಕೀಕರಣದ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೂ ಈ ವಿಷಯವನ್ನು ಹಲವು ಬಾರಿ ತರಲಾಗಿತ್ತು. ಸಂಸದೀಯ ಹಾಗೂ ಸಾಂಸ್ಥಿಕ ವೇದಿಕೆಗಳಲ್ಲಿಯೂ ಈ ಬೇಡಿಕೆಯನ್ನು ನಿರಂತರವಾಗಿ ಪ್ರಸ್ತಾಪಿಸಲಾಗಿತ್ತು. ಉಭಯ ಜಿಲ್ಲೆಗಳ ಸಂಸದರು ಈ ವಿಚಾರದಲ್ಲಿ ಸತತವಾಗಿ ನಡೆಸಿದ ಪ್ರಯತ್ನದ ಫಲವಾಗಿ ಇದೀಗ ಮಹತ್ವದ ಆದೇಶ ಹೊರಬಿದ್ದಿದೆ ಎಂದು ಬಿಜೆಪಿ ಹೇಳಿದೆ.
ಕರಾವಳಿಯ ಸಂಸದರು ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿ ತ್ವರಿತ ಹಾಗೂ ಸಕಾರಾತ್ಮಕ ಕ್ರಮ ಕೈಗೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ಕರಾವಳಿಯ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದೆ.
ಮಂಗಳೂರಿನ ರೈಲ್ವೆ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಹಾಗೂ ರೈಲ್ವೆ ಸಂಬಂಧಿತ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಈ ಏಕೀಕರಣ ನೆರವಾಗಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಹಾಗೂ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.