-->
ಆಹಾರ ನಿಗಮಕ್ಕೆ ಹೊಸ ರೂಪ: 6 ತಿಂಗಳಲ್ಲಿ ಮಹತ್ವದ ಬದಲಾವಣೆ— ಸಚಿವ ರಿಜ್ವಾನ್ ಅರ್ಷದ್

ಆಹಾರ ನಿಗಮಕ್ಕೆ ಹೊಸ ರೂಪ: 6 ತಿಂಗಳಲ್ಲಿ ಮಹತ್ವದ ಬದಲಾವಣೆ— ಸಚಿವ ರಿಜ್ವಾನ್ ಅರ್ಷದ್


ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಮುಂದಿನ ಆರು ತಿಂಗಳಲ್ಲಿ ಹೊಸ ರೂಪ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೂತನವಾಗಿ ನೇಮಕಗೊಂಡಿರುವ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಹಾರ ನಿಗಮವು ಬಡವರ ಆಹಾರದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಮಹತ್ವದ ಸಂಸ್ಥೆಯಾಗಿದೆ. ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವ ಉದ್ದೇಶದಿಂದಲೇ ತಾವು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ತಿಳಿಸಿದರು.

“ನೀವು ಹೊಸದಾಗಿ ಆಯ್ಕೆಯಾಗಿದ್ದೀರಿ. ನಿಮ್ಮ ಹಾಗೆಯೇ ನಾನೂ ಹೊಸದಾಗಿ ಸಚಿವನಾಗಿದ್ದೇನೆ. ಹೊಸ ಬದಲಾವಣೆ ತರಬೇಕಾದರೆ ಹೊಸಬರು ಬರಬೇಕಾಗುತ್ತದೆ. ಬಡವರೊಂದಿಗೆ ನೇರವಾಗಿ ಕೆಲಸ ಮಾಡುವ ಸಂಸ್ಥೆಗೆ ನೀವು ಆಯ್ಕೆಯಾಗಿದ್ದೀರಿ. ಇತರೆ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

ಇಲಾಖೆಯ ಗೋದಾಮುಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಆಹಾರ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಇಲ್ಲದಿರುವುದನ್ನು ಪ್ರಸ್ತಾಪಿಸಿದ ಸಚಿವರು, ಇಂತಹ ವ್ಯವಸ್ಥೆಗಳನ್ನು ಶೀಘ್ರದಲ್ಲೇ ಸುಧಾರಿಸಲಾಗುವುದು ಎಂದು ಹೇಳಿದರು.

“ನಾವು ನೀವು ಎಲ್ಲರೂ ಸೇರಿ ಕೆಲಸ ಮಾಡಬೇಕು. ಜನರಿಗೆ ಕಾಣಿಸುವ ರೀತಿಯಲ್ಲಿ ಬದಲಾವಣೆ ತರಬೇಕು. ನಮ್ಮ ಉದ್ದೇಶ ಸರಿಯಾಗಿದ್ದರೆ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇಲಾಖೆಯಿಂದ ತೆಗೆದುಹಾಕಿರುವ ವಿಚಾರವನ್ನು ಪ್ರಸ್ತಾಪಿಸಿದ ರಿಜ್ವಾನ್ ಅರ್ಷದ್, ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ ತಂದು ಜನರ ವಿಶ್ವಾಸ ಗಳಿಸಿದರೆ ಮತ್ತಷ್ಟು ಯೋಜನೆಗಳನ್ನು ಇಲಾಖೆಗೆ ತರಲು ಸಾಧ್ಯವಾಗುತ್ತದೆ ಎಂದರು. ಬಿಸಿಯೂಟ ಯೋಜನೆಯನ್ನು ಮತ್ತೆ ಇಲಾಖೆಗೆ ವಾಪಸ್ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.

“ಯಾವಾಗಲೋ ಬದಲಾವಣೆ ಆಗುತ್ತದೆ ಎಂದು ಕಾಯುವುದಲ್ಲ. ಇವತ್ತೇ ಬದಲಾವಣೆ ಆಗಬೇಕು. ಜೀವನ ನಡೆಸಲು ಕಷ್ಟಪಡುತ್ತಿರುವ ಜನರೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಬಡವರಿಗೆ ಸೇವೆ ಸಲ್ಲಿಸುವ ಅವಕಾಶ ನಮಗೆ ಸಿಕ್ಕಿದೆ. ಮುಖ್ಯಮಂತ್ರಿಗಳು ಈ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೇಳಿದಾಗ, ಇದೊಂದು ಸುವರ್ಣಾವಕಾಶ ಎಂದು ಒಪ್ಪಿಕೊಂಡಿದ್ದೇನೆ,” ಎಂದು ಸಚಿವರು ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 386 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜುಲೈ 17ರಂದು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಈ ಪೈಕಿ 191 ಅಭ್ಯರ್ಥಿಗಳು ಈಗಾಗಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಪ್ರಶಿಕ್ಷಣಾರ್ಥಿಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ.

Ads on article

Advertise in articles 1

advertising articles 2

Advertise under the article