ಸುಮಂತ್ ಸಂಶಯಾಸ್ಪದ ಸಾವು: ಕುಟುಂಬಿಕರಿಗೆ ಮಂಪರು ಪರೀಕ್ಷೆ, ಬ್ರೈನ್ ಮ್ಯಾಪಿಂಗ್
ಬೆಳ್ತಂಗಡಿ ಗೇರುಕಟ್ಟೆ ಸಮೀಪದ ಸಂಭೋಳ್ಯದಲ್ಲಿ 15 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಸುಮಂತ್ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ನಿಗೂಢತೆಯನ್ನು ಭೇದಿಸಲು ಬೆಳ್ತಂಗಡಿ ಪೊಲೀಸರು ವೈಜ್ಞಾನಿಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನ್ಯಾಯಾಲಯದ ಪೂರ್ವಾನುಮತಿ ಪಡೆದುಕೊಂಡಿರುವ ಪೊಲೀಸರು, ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭಿಸಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದ ಪೊಲೀಸ್ ತಂಡವು ಮೃತ ಬಾಲಕನ ಕುಟುಂಬದ ಐವರನ್ನು ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಕರೆದೊಯ್ದು ಮೊದಲ ಹಂತದ ವಿಚಾರಣೆ ನಡೆಸಿದೆ.
ಆಗಸ್ಟ್ 10ರಂದು ಮೃತ ಸುಮಂತ್‌ನ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ ಹಾಗೂ ಕಾಲೇಜು ವಿದ್ಯಾರ್ಥಿಯಾಗಿರುವ ಸಹೋದರ ಸುದರ್ಶನ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಳಿಕ ಆಗಸ್ಟ್ 11ರಂದು ಪೆರ್ಲದ ಅರ್ಚಕರಾಗಿರುವ ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಕಾಸರಗೋಡಿನ ಸಂಬಂಧಿ, ಅಡುಗೆ ವೃತ್ತಿಯಲ್ಲಿರುವ ಲಕ್ಷ್ಮೀನಾರಾಯಣ ಅವರನ್ನು ಎಫ್‌ಎಸ್‌ಎಲ್ ತಜ್ಞರು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ.
ಕುಟುಂಬಸ್ಥರಿಂದ ಪಡೆದ ಉತ್ತರಗಳು ಹಾಗೂ ಇದುವರೆಗೆ ನಡೆದ ಪೊಲೀಸ್ ತನಿಖೆಯಿಂದ ಲಭ್ಯವಾಗಿರುವ ಮಾಹಿತಿಯನ್ನು ತಾಳೆಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದ ಬ್ರೈನ್ ಮ್ಯಾಪಿಂಗ್‌ಗಾಗಿ ಕುಟುಂಬದ ಸದಸ್ಯರನ್ನು ಮತ್ತೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಕುಟುಂಬಸ್ಥರ ಮೊದಲ ಹಂತದ ಪರೀಕ್ಷೆ ಪೂರ್ಣಗೊಂಡ ಬಳಿಕ ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತ ವ್ಯಕ್ತಿಗಳ ಮೇಲೆಯೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
ಜನವರಿ 14ರಂದು ಬೆಳಗಿನ ಜಾವ ಮನೆ ಸಮೀಪದ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಿದ್ದ ಸುಮಂತ್ ಬಳಿಕ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದನು. ಆತನ ಶವ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿತ್ತು. ಆರಂಭದಿಂದಲೂ ಇದು ಸಹಜ ಸಾವು ಅಲ್ಲ, ವ್ಯವಸ್ಥಿತ ಹತ್ಯೆಯಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ ಇದುವರೆಗೆ ಪ್ರಕರಣಕ್ಕೆ ಸ್ಪಷ್ಟ ತಿರುವು ನೀಡುವಂತಹ ಸುಳಿವುಗಳು ಲಭ್ಯವಾಗಿರಲಿಲ್ಲ. ಇದೀಗ ವೈಜ್ಞಾನಿಕ ತನಿಖೆಯ ಮೊರೆ ಹೋಗಿರುವ ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗಳ ಮೂಲಕ ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.