ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆಗೆ ಸಿಪಿಐಎಂ ಖಂಡನೆ
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಂದ್ರ ಶೆಟ್ಟಿ ಅವರ ವಿರುದ್ಧ ಸಾರ್ವಜನಿಕರಿಂದ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡಿದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸಾರ್ವಜನಿಕವಾಗಿ ದೈಹಿಕ ಹಲ್ಲೆ ನಡೆಸಿರುವ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) — ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ವೈದ್ಯರ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದಿದ್ದರೂ, ಅವುಗಳ ಸತ್ಯಾಸತ್ಯತೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಿ ಸೂಕ್ತ ಕಾನೂನು ಕ್ರಮದ ಮೂಲಕ ಪರಿಹರಿಸಿಕೊಳ್ಳಬೇಕಿತ್ತು. ಆರೋಪಗಳು ಸತ್ಯವಲ್ಲದಿದ್ದರೆ ಸಂಬಂಧಪಟ್ಟ ದಾಖಲೆಗಳು ಹಾಗೂ ಕಾನೂನು ಪ್ರಕ್ರಿಯೆಯ ಮೂಲಕ ತಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸುವುದು ಸೂಕ್ತ ಮಾರ್ಗವಾಗಿದೆ. ಆದರೆ ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಸಿಪಿಎಂ ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡುವ ಪತ್ರಕರ್ತರ ಮೇಲೆ ದೈಹಿಕ ದಾಳಿ ನಡೆಸುವುದು ಪತ್ರಿಕಾ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹ ಕೃತ್ಯವಾಗಿದೆ. ಇಂತಹ ಘಟನೆಗಳು ಸಮಾಜದಲ್ಲಿ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣಕ್ಕೂ ಅಡ್ಡಿಯಾಗುತ್ತವೆ. ಅಲ್ಲದೆ, ವೈದ್ಯ ವೃತ್ತಿಗೆ ಸಮಾಜದಲ್ಲಿ ಇರುವ ಗೌರವ ಮತ್ತು ನಂಬಿಕೆಗೆ ಇಂತಹ ವರ್ತನೆ ಅಪಖ್ಯಾತಿ ತರುವಂತಾಗಿದೆ ಎಂದು ಸಮಿತಿ ಹೇಳಿದೆ.
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ಮಹೇಂದ್ರ ಶೆಟ್ಟಿ ವಿರುದ್ಧ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ಆರೋಪ ಸಾಬೀತಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.