-->
 ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ: ಸಹಬಾಳ್ವೆ ಉಡುಪಿ ಖಂಡನೆ

ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ: ಸಹಬಾಳ್ವೆ ಉಡುಪಿ ಖಂಡನೆ



ಕುಂದಾಪುರದ ಹೊಟೇಲ್‌ನಲ್ಲಿ ಪತ್ನಿ ಹಾಗೂ ಗೆಳೆಯರೊಂದಿಗೆ ಕುಳಿತಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಡಾ. ಮಹೇಂದ್ರ ಕುಮಾರ್ ಶೆಟ್ಟಿ ದೈಹಿಕ ಹಲ್ಲೆ ನಡೆಸಿರುವುದನ್ನು ಸಹಬಾಳ್ವೆ ಉಡುಪಿ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಶ್ರೀಕಾಂತ್ ಹೆಮ್ಮಾಡಿ ವರದಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿರುವುದು ತಿಳಿದುಬಂದಿದೆ. ಪತ್ರಕರ್ತರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ಹಲ್ಲೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಹಬಾಳ್ವೆ ಉಡುಪಿ ಇದರ ಪ್ರಧಾನ ಸಂಚಾಲಕ ಫಣಿರಾಜ್ ಹೇಳಿದ್ದಾರೆ.

ಭ್ರಷ್ಟಾಚಾರದ ಆರೋಪಗಳ ಸತ್ಯಾಸತ್ಯತೆಗಳನ್ನು ತನಿಖೆ, ಸಾಕ್ಷ್ಯ ಹಾಗೂ ಪುರಾವೆಗಳ ಆಧಾರದ ಮೇಲೆ ಸಂವಿಧಾನಬದ್ಧ ಕಾನೂನು ಪ್ರಕ್ರಿಯೆಯ ಮೂಲಕ ನಿರ್ಧರಿಸಬೇಕೇ ಹೊರತು, ಕಾನೂನನ್ನು ಕೈಗೆತ್ತಿಕೊಂಡು ದೈಹಿಕ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಸುಶಿಕ್ಷಿತ ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬರು ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿರುವುದು ಖಂಡನಾರ್ಹ.

ಅಧಿಕಾರಸ್ಥರನ್ನು ಎದುರು ಹಾಕಿಕೊಂಡು ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ಪತ್ರಿಕಾ ಧರ್ಮದ ಪ್ರಮುಖ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕಾಗಿ ಪತ್ರಕರ್ತರೊಬ್ಬರು ಹಲ್ಲೆಗೆ ಒಳಗಾಗುವುದು ಕೇವಲ ಪತ್ರಕರ್ತರಿಗೆ ಸಂಬಂಧಿಸಿದ ವಿಚಾರವಲ್ಲ. ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಸಾಮಾನ್ಯ ಜನರು ನ್ಯಾಯಕ್ಕಾಗಿ ಧ್ವನಿ ಎತ್ತದಂತೆ ದಮನಿಸುವ ಪ್ರವೃತ್ತಿಯ ಪ್ರತೀಕವೂ ಇದಾಗಿದೆ ಎಂದು ಫಣಿರಾಜ್ ಹೇಳಿದ್ದಾರೆ.

ಇಂತಹ ಘಟನೆಗಳು ಕಾನೂನುಬದ್ಧ ನಾಗರಿಕ ಸಮಾಜದ ಶಾಂತಿಯುತ ಬದುಕಿಗೆ ಧಕ್ಕೆ ಉಂಟುಮಾಡುತ್ತವೆ. ಶಾಂತಿ, ಸೌಹಾರ್ದಯುತ ಸಮಾಜ ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಹಬಾಳ್ವೆ ಉಡುಪಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಅಧಿಕಾರದ ಒತ್ತಡಕ್ಕೆ ಮಣಿಯದೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article