ಮಾಹೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ: ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮುನ್ನಡೆ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಗಮನಾರ್ಹ ಸಾಧನೆ ಮಾಡಿದೆ. ಶಾಂಘೈ ರ್‍ಯಾಂಕಿಂಗ್ ಕನ್ಸಲ್ಟೆನ್ಸಿ ಪ್ರಕಟಿಸಿರುವ 2026ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ (ARWU) ಪಟ್ಟಿಯಲ್ಲಿ ಮಾಹೆ 701–800ರ ಶ್ರೇಣಿಗೆ ಏರಿಕೆಯಾಗಿದೆ.
ಕಳೆದ ವರ್ಷ 801–900ರ ಶ್ರೇಣಿಯಲ್ಲಿದ್ದ ಮಾಹೆ, ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ನಿರಂತರವಾಗಿ ತೋರುತ್ತಿರುವ ಸಾಧನೆಯ ಫಲವಾಗಿ ಈ ಬಾರಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಎಆರ್‌ಡಬ್ಲ್ಯುಯು ಟ್ರ್ಯಾಕರ್ ವಿಶ್ಲೇಷಣೆಯ ಪ್ರಕಾರ, ಮಾಹೆ ಜಾಗತಿಕವಾಗಿ 779ನೇ ಸ್ಥಾನ ಹಾಗೂ ಭಾರತದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. 2025ರ ರ್‍ಯಾಂಕಿಂಗ್‌ಗೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ 36 ಸ್ಥಾನ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮೂರು ಸ್ಥಾನಗಳ ಮುನ್ನಡೆ ಸಾಧಿಸಿದೆ.
ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಆದ್ಯತೆಗೆ ಈ ಸಾಧನೆ ಸಾಕ್ಷಿಯಾಗಿದೆ. ಜ್ಞಾನದ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಂಶೋಧನೆಗಳಿಗೆ ವಿಶ್ವವಿದ್ಯಾಲಯ ನೀಡುತ್ತಿರುವ ಪ್ರೋತ್ಸಾಹವನ್ನು ಈ ರ್‍ಯಾಂಕಿಂಗ್ ಮತ್ತೊಮ್ಮೆ ಪ್ರತಿಬಿಂಬಿಸಿದೆ.
ಈ ಕುರಿತು ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, “ಎಆರ್‌ಡಬ್ಲ್ಯುಯು ರ್‍ಯಾಂಕಿಂಗ್‌ನಲ್ಲಿ ದೊರೆತಿರುವ ಈ ಮುನ್ನಡೆ ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಿಬ್ಬಂದಿಯ ನಿರಂತರ ಪರಿಶ್ರಮದ ಫಲವಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ಸಾಧನೆ ಪ್ರೇರಣೆ ನೀಡಿದೆ,” ಎಂದರು.
ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಸಮಾಜಕ್ಕೆ ಉತ್ತಮ ಪ್ರತಿಭೆಗಳನ್ನು ನೀಡುವ ಕಾರ್ಯವನ್ನು ಮಾಹೆ ಮುಂದುವರಿಸಲಿದೆ ಎಂದು ಅವರು ಹೇಳಿದರು.
2026ರ ರ್‍ಯಾಂಕಿಂಗ್‌ನಲ್ಲಿ ಮಾಹೆ ಸಾಧಿಸಿರುವ ಈ ಪ್ರಗತಿಯು ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಬಲಿಷ್ಠ ಶೈಕ್ಷಣಿಕ ಪರಿಸರ ನಿರ್ಮಿಸುವ ಸಂಸ್ಥೆಯ ಬದ್ಧತೆಗೆ ಮತ್ತೊಂದು ಮಾನ್ಯತೆಯಾಗಿದೆ.
.jpeg)