ಸೆಟ್‌ಬ್ಯಾಕ್, ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ಕಟ್ಟಡ ಸಂಖ್ಯೆ, ವಿದ್ಯುತ್ NOC ನೀಡದಂತೆ ಆಕ್ಷೇಪ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸರಿಯಾದ ಸೆಟ್‌ಬ್ಯಾಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಕಟ್ಟಡ ಸಂಖ್ಯೆ ನೀಡುವುದು ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ನಿರಾಕ್ಷೇಪಣಾ ಪತ್ರ (NOC) ನೀಡುವುದನ್ನು ತಡೆಹಿಡಿಯಬೇಕು ಎಂದು ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.
ಈ ಕುರಿತು ನಗರಸಭೆಗೆ ಆಕ್ಷೇಪಣೆ ಸಲ್ಲಿಸಿರುವ ಅವರು, ಬನ್ನಂಜೆ ವಾರ್ಡಿನ ಹೆಗ್ಡೆ ಗ್ಯಾರೇಜ್ ಬಳಿ ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಡದಲ್ಲಿ ಸೂಕ್ತ ಸೆಟ್‌ಬ್ಯಾಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ್ದಾರೆ.
ಈ ಕಟ್ಟಡದಲ್ಲಿ ಲಾಡ್ಜಿಂಗ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ಸ್ಥಳೀಯವಾಗಿ ದೊರೆತಿದೆ. ಈ ಬಗ್ಗೆ ನಗರಸಭೆಯ ಗಮನಕ್ಕೆ ಬಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಕಟ್ಟಡದ ನಿಯಮಾನುಸಾರ ಅನುಮತಿ, ಸೆಟ್‌ಬ್ಯಾಕ್ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸದೆ ಕಟ್ಟಡ ಸಂಖ್ಯೆ ನೀಡಬಾರದು ಹಾಗೂ ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.
ಇದೇ ರೀತಿ ಶಿರಿಬೀಡು ವಾರ್ಡಿನ ಬನ್ನಂಜೆ ನಾರಾಯಣ ಗುರು ಮಂದಿರದ ಎದುರು ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡದಲ್ಲಿಯೂ ಸೂಕ್ತ ಸೆಟ್‌ಬ್ಯಾಕ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಟ್ಟಡ ವಾಣಿಜ್ಯ ಸಂಕೀರ್ಣವಾಗಲಿದೆ ಎಂಬ ಮಾಹಿತಿ ಇದ್ದು, ಈಗಾಗಲೇ ವಾಹನ ದಟ್ಟಣೆಯಿಂದ ಬಳಲುತ್ತಿರುವ ಪ್ರದೇಶದಲ್ಲಿ ಮತ್ತಷ್ಟು ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
“ಕರಾವಳಿಯಿಂದ ಕಲ್ಲಂಕದವರೆಗೆ ಪ್ರತಿದಿನವೂ ರಸ್ತೆ ವಾಹನಗಳಿಂದ ತುಂಬಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗಿರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ವಾಣಿಜ್ಯ ಕಟ್ಟಡಗಳಿಗೆ ಅನುಮತಿ ನೀಡಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ,” ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.
ಈ ಹಿಂದೆ ಉಡುಪಿ ನಗರಸಭೆಯ ಅಧಿವೇಶನದಲ್ಲಿಯೂ ಪಾರ್ಕಿಂಗ್ ಸಮಸ್ಯೆ ಹಾಗೂ ಇಂತಹ ಕಟ್ಟಡಗಳ ಕುರಿತು ತಾವು ಪ್ರಶ್ನಿಸಿದ್ದಾಗಿ ಅವರು ತಿಳಿಸಿದ್ದಾರೆ. ಈ ಸಂಬಂಧ ಲಿಖಿತ ಮನವಿಯನ್ನೂ ನಗರಸಭೆಗೆ ಸಲ್ಲಿಸಿ, ಅದರ ಪ್ರತಿಯನ್ನು ಪಡೆದುಕೊಂಡಿದ್ದರೂ ಸಮರ್ಪಕ ಉತ್ತರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಎರಡೂ ಕಟ್ಟಡಗಳ ಸೆಟ್‌ಬ್ಯಾಕ್, ಪಾರ್ಕಿಂಗ್ ವ್ಯವಸ್ಥೆ, ಕಟ್ಟಡ ಪರವಾನಗಿ ಹಾಗೂ ಬಳಕೆಯ ಉದ್ದೇಶ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು. ನಿಯಮಗಳಿಗೆ ವಿರುದ್ಧವಾಗಿದ್ದರೆ ಕಟ್ಟಡ ಸಂಖ್ಯೆ ನೀಡುವುದು ಮತ್ತು ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡುವುದನ್ನು ತಕ್ಷಣ ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ನಿಯಮಾನುಸಾರ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಬಾರದು,” ಎಂದು ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.
