ಲಕ್ಷ್ಮೀ ಮಂಜುನಾಥ್ ಕೊಳ ಕರ್ತವ್ಯ ನಿಷ್ಠೆ, ಕಾರ್ಯಬದ್ಧತೆ ಅನುಕರಣೀಯ: ಕುತ್ಯಾರು ನವೀನ್ ಶೆಟ್ಟಿ
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಅಲ್ಪಾವಧಿಯಲ್ಲೇ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಶ್ರಮಿಸಿದ್ದ ಲಕ್ಷ್ಮೀ ಮಂಜುನಾಥ್ ಕೊಳ ಅವರ ಹಠಾತ್ ನಿಧನ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕರ್ತವ್ಯನಿಷ್ಠೆ, ಕಾರ್ಯಬದ್ಧತೆ ಹಾಗೂ ಜನಸೇವೆಯ ಮನೋಭಾವ ಎಲ್ಲರಿಗೂ ಅನುಕರಣೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಉಡುಪಿ ನಗರ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ನುಡಿನಮನ ಸಲ್ಲಿಸಿದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಲಕ್ಷ್ಮೀ ಮಂಜುನಾಥ್ ಕೊಳ ಅವರ ಅಕಾಲಿಕ ಅಗಲುವಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ನಿಸ್ವಾರ್ಥ ಜನಸೇವೆ ಮತ್ತು ಸಂಘಟನಾ ಬದ್ಧತೆಯ ಮೂಲಕ ಅವರು ಪ್ರತಿಯೊಬ್ಬ ಕಾರ್ಯಕರ್ತರಿಗೂ ಆದರ್ಶವಾಗಿದ್ದರು ಎಂದರು.
ಲಕ್ಷ್ಮೀ ಮಂಜುನಾಥ್ ಕೊಳ ಅವರು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿರದೆ, ಮೀನುಗಾರರ ಸಹಕಾರಿ ಸಂಘ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸನಾತನ ಸಂಸ್ಕೃತಿಯ ವಿಚಾರಗಳನ್ನು ಪಸರಿಸುವಲ್ಲಿಯೂ ನಿರಂತರವಾಗಿ ಶ್ರಮಿಸಿದ್ದರು. ನಗರಸಭಾ ಸದಸ್ಯೆ ಹಾಗೂ ಉಪಾಧ್ಯಕ್ಷೆಯಾಗಿ ತಳಮಟ್ಟದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಅವರು ಶ್ರೇಷ್ಠ ಜನಸೇವಕಿಯಾಗಿದ್ದರು ಎಂದು ಯಶ್ಪಾಲ್ ಸುವರ್ಣ ಸ್ಮರಿಸಿದರು.
ಬಿಜೆಪಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ನುಡಿನಮನ ಸಲ್ಲಿಸಿ, ಸರಳ, ಸಜ್ಜನಿಕೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಲಕ್ಷ್ಮೀ ಮಂಜುನಾಥ್ ಕೊಳ ಅವರು ಸದಾ ನಗುಮೊಗದಿಂದ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದರು. ಪಕ್ಷ ಸಂಘಟನೆಯ ಜೊತೆಗೆ ಜನಸೇವೆಯಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದ ಅವರ ಅಕಾಲಿಕ ನಿಧನ ಎಲ್ಲರನ್ನೂ ದುಃಖತಪ್ತರನ್ನಾಗಿಸಿದೆ ಎಂದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಮಾಜಿ ನಗರಸಭಾ ಸದಸ್ಯರಾದ ಗಿರೀಶ್ ಎಂ. ಅಂಚನ್ ಹಾಗೂ ವಿಜಯ ಕೊಡವೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅವರು ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ನೂರಾರು ಮಂದಿ ಲಕ್ಷ್ಮೀ ಮಂಜುನಾಥ್ ಕೊಳ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಜ್ಯೋತಿ ಉದಯ ಪೂಜಾರಿ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯ ಭಟ್ ಕಡೆಕಾರ್ ಪ್ರಾರ್ಥನೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

.jpeg)