ಕೇಮಾರು ಸಾಂದೀಪನಿ ಸಾಧನಾಶ್ರಮಕ್ಕೆ 1 ಕೋಟಿ ಅನುದಾನ: ಸರ್ಕಾರಕ್ಕೆ ಈಶ ವಿಠಲದಾಸ ಸ್ವಾಮೀಜಿ ಕೃತಜ್ಞತೆ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೇಮಾರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಕೇಮಾರು ಸಾಂದೀಪನಿ ಸಾಧನಾಶ್ರಮದ ಪೀಠಾಧಿಪತಿ ಈಶ ವಿಠಲದಾಸ ಸ್ವಾಮೀಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಠದ ಅಭಿವೃದ್ಧಿಗಾಗಿ ಸಲ್ಲಿಸಲಾಗಿದ್ದ ಮನವಿಯನ್ನು ಸರ್ಕಾರ ಪುರಸ್ಕರಿಸಿ ಅನುದಾನ ಬಿಡುಗಡೆ ಮಾಡಿರುವುದು ಆಶ್ರಮದ ಲಕ್ಷಾಂತರ ಭಕ್ತರು ಹಾಗೂ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಅನುದಾನ ಬಿಡುಗಡೆಗೆ ಸಹಕರಿಸಿದ ಹಾಗೂ ಶ್ರಮಿಸಿದ ಎಲ್ಲರಿಗೂ ಶ್ರೀಗಳು ಕೃತಜ್ಞತೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಮಠದ ಅಭಿವೃದ್ಧಿ ಹಾಗೂ ಜನಶ್ರೇಯೋಭಿವೃದ್ಧಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಲಾಗುವುದು. ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಮಠದ ಪೂಜಾ ಕೈಂಕರ್ಯಗಳು ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.
ಮಠದ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿರುವುದು ಭಕ್ತರಿಗೆ ಮಾತ್ರವಲ್ಲದೆ ತಮ್ಮಲ್ಲಿಯೂ ಸಂತಸ ಮೂಡಿಸಿದೆ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.
ಎಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಉನ್ನತ ವೃತ್ತಿಜೀವನ ರೂಪಿಸಿಕೊಳ್ಳುವ ಅವಕಾಶವಿದ್ದರೂ, ಭೌತಿಕ ಪ್ರಪಂಚದ ಆಕರ್ಷಣೆಯನ್ನು ತೊರೆದು ಆಧ್ಯಾತ್ಮಿಕತೆಯ ಹಾದಿ ಹಿಡಿದ ಅಪರೂಪದ ಮಠಾಧೀಶರಲ್ಲಿ ಈಶ ವಿಠಲದಾಸ ಸ್ವಾಮೀಜಿ ಪ್ರಮುಖರು.
ಆಧ್ಯಾತ್ಮಿಕ ತೃಷೆ ಯನ್ನು ತಣಿಸಿಕೊಳ್ಳಲು ಹಿಮಾಲಯ, ಹರಿದ್ವಾರ, ಋಷಿಕೇಶ, ವೃಂದಾವನ ಹಾಗೂ ಮಥುರಾ ಸೇರಿದಂತೆ ದೇಶದ ಪ್ರಮುಖ ಪವಿತ್ರ ಕ್ಷೇತ್ರಗಳಿಗೆ ಸಂಚರಿಸಿದ ಅವರು, ಹಲವು ಸಾಧು-ಸಂತರ ಮಾರ್ಗದರ್ಶನ ಪಡೆದರು. ಬಳಿಕ ಕೊಲ್ಲೂರಿನ ಕೊಡಚಾದ್ರಿ ಬೆಟ್ಟಗಳಲ್ಲಿ ನೆಲೆಸಿ ವೇದ, ಉಪನಿಷತ್ತು ಹಾಗೂ ವಿವಿಧ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ತಪಸ್ಸಿನಲ್ಲಿ ನಿರತರಾದರು.
1999ರಲ್ಲಿ ಮೂಡುಬಿದಿರೆಯ ಪಾಲಡ್ಕ ಸಮೀಪ ಕೇಮಾರು ಮಠ ಹಾಗೂ ಸಾಂದೀಪನಿ ಆಶ್ರಮ ಸ್ಥಾಪನೆಯಾಯಿತು. 2002ರಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನವನ್ನು ಸಾರ್ವಜನಿಕರ ಪ್ರಾರ್ಥನೆಗೆ ಮುಕ್ತಗೊಳಿಸಲಾಯಿತು.
ಸರ್ವಧರ್ಮ ಸಹಿಷ್ಣುತೆ, ಸಮಗ್ರ ಶಿಕ್ಷಣ, ಸಾಮಾಜಿಕ ಮೌಲ್ಯಗಳ ವರ್ಧನೆ ಹಾಗೂ ನೈಸರ್ಗಿಕ ಸಂತೋಷದ ಬದುಕಿನ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಆಶ್ರಮದ ಪ್ರಮುಖ ಉದ್ದೇಶಗಳಾಗಿವೆ. ಆಧುನಿಕ ಶಿಕ್ಷಣದ ಜತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಹಾಗೂ ನೈತಿಕ ಸಂಸ್ಕಾರ ದೊರೆಯಬೇಕು ಎಂಬ ಆಶಯವನ್ನು ಶ್ರೀಗಳು ಹೊಂದಿದ್ದಾರೆ.
ಸಮಾಜದಲ್ಲಿನ ತಾರತಮ್ಯ ಹಾಗೂ ಕೀಳುಮಟ್ಟದ ಚಿಂತನೆಗಳನ್ನು ತೊಡೆದುಹಾಕಿ, ಯುವಜನತೆಯನ್ನು ಸನ್ಮಾರ್ಗದತ್ತ ಕೊಂಡೊಯ್ದು ಸಶಕ್ತ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕೃತಿಯನ್ನು ದೇವರ ದಿವ್ಯ ಕೊಡುಗೆ ಎಂದು ಪರಿಗಣಿಸುವ ಶ್ರೀಗಳು, ಧಾರ್ಮಿಕ ಬೋಧನೆಗೆ ಸೀಮಿತವಾಗದೆ ಸಮಾಜ ಸೇವೆ, ಬಡವರು ಹಾಗೂ ಹಿಂದುಳಿದವರ ಏಳಿಗೆ ಸೇರಿದಂತೆ ವಿವಿಧ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಸಮುದಾಯಗಳ ಜನರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಸಮಾಜಮುಖಿ ಚಟುವಟಿಕೆಗಳ ಮೂಲಕ ಅವರು ಜನಮನ್ನಣೆ ಗಳಿಸಿದ್ದಾರೆ.