-->
 ಉಡುಪಿ ಗುತ್ತಿಗೆದಾರರ 1,205.99 ಕೋಟಿ ರೂ. ಬಿಲ್ ಬಾಕಿ: ಬಾಕಿ ಮೊತ್ತ ಬಿಡುಗಡೆಗೆ ಸಿಎಂಗೆ ಮನವಿ

ಉಡುಪಿ ಗುತ್ತಿಗೆದಾರರ 1,205.99 ಕೋಟಿ ರೂ. ಬಿಲ್ ಬಾಕಿ: ಬಾಕಿ ಮೊತ್ತ ಬಿಡುಗಡೆಗೆ ಸಿಎಂಗೆ ಮನವಿ


ಉಡುಪಿ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ 1,205.99 ಕೋಟಿ ಮೊತ್ತದ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ತಿಳಿಸಿದೆ.

ಈ ಕುರಿತು ಹೆಬ್ರಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಬಾಕಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಬಾಕಿ ಬಿಲ್‌ಗಳು ಪಾವತಿಯಾದರೆ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದ್ದು, ಗುತ್ತಿಗೆದಾರರು, ಕಾರ್ಮಿಕರು, ಸಾಮಗ್ರಿ ಪೂರೈಕೆದಾರರು ಹಾಗೂ ಯಂತ್ರೋಪಕರಣಗಳ ಮಾಲೀಕರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಇದರಿಂದ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ ಬ್ರಹ್ಮಾವರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉಪ್ಪುಂದ ಗೋಕುಲದಾಸ್ ಶೆಟ್ಟಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ 189.86 ಕೋಟಿ, ವಾರಾಹಿ ಯೋಜನಾ ವಿಭಾಗದಲ್ಲಿ 322.42 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 4.92 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ 618.85 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 21.88 ಕೋಟಿ ಹಾಗೂ ಬಂದರು ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 43.01 ಕೋಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 1,205.99 ಕೋಟಿ ಬಿಲ್‌ಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲದ ಬಡ್ಡಿ, ಇಎಂಐ, ಕಾರ್ಮಿಕರ ವೇತನ ಹಾಗೂ ಸಾಮಗ್ರಿ ಪೂರೈಕೆದಾರರಿಗೆ ಹಣ ಪಾವತಿಸಲು ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಬೇರೆ ಜಿಲ್ಲೆಗಳ ಗುತ್ತಿಗೆದಾರರಿಗೆ ಬಿಲ್‌ಗಳ ಪಾವತಿ ನಡೆಯುತ್ತಿದ್ದರೂ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೆ ಯಾವುದೇ ಬಿಲ್ ಪಾವತಿಯಾಗದಿರುವುದು ತಾರತಮ್ಯ ಧೋರಣೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಾಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಬ್ಯಾಂಕ್ ಸಾಲ, ಓವರ್‌ಡ್ರಾಫ್ಟ್ ಹಾಗೂ ಖಾಸಗಿ ಸಾಲದ ಮೂಲಕ ಬಂಡವಾಳ ಹೊಂದಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಾರ್ಮಿಕರ ವೇತನ, ಯಂತ್ರೋಪಕರಣಗಳ ಬಾಡಿಗೆ, ಡೀಸೆಲ್, ಸಿಮೆಂಟ್, ಉಕ್ಕು, ಜಿಲ್ಲಿ, ಮರಳು, ಪೈಪ್ ಸೇರಿದಂತೆ ವಿವಿಧ ಸಾಮಗ್ರಿಗಳ ವೆಚ್ಚವನ್ನು ಮುಂಗಡವಾಗಿ ಭರಿಸಲಾಗಿದೆ. ಜತೆಗೆ ಜಿಎಸ್‌ಟಿ, ರಾಯಲ್ಟಿ ಹಾಗೂ ಕಾರ್ಮಿಕ ಸೆಸ್ ಸೇರಿದಂತೆ ಶಾಸನಬದ್ಧ ಪಾವತಿಗಳನ್ನೂ ಮಾಡಲಾಗಿದೆ ಎಂದರು.

ಬಿಲ್ ಪಾವತಿ ವಿಳಂಬದಿಂದ ಬ್ಯಾಂಕ್ ಬಡ್ಡಿ ಹಾಗೂ ಇಎಂಐ ಪಾವತಿಸುವುದು ಕಷ್ಟವಾಗಿದ್ದು, ಕಾರ್ಮಿಕರು ಮತ್ತು ಸಾಮಗ್ರಿ ಪೂರೈಕೆದಾರರಿಗೆ ಹಣ ನೀಡಲಾಗದೆ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಲೂ ತೊಂದರೆಯಾಗಿದೆ. ಆದ್ದರಿಂದ ಬಾಕಿ ಇರುವ ಎಲ್ಲ ಬಿಲ್‌ಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪಾವತಿ ಮಾಡುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಬೇಕು. ಬಹುಕಾಲದಿಂದ ಬಾಕಿ ಇರುವ ಹಾಗೂ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಬಿಲ್‌ಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಬಿ.ಬಿ. ಪೂಜಾರಿ, ಉಪಾಧ್ಯಕ್ಷರಾದ ಎ.ಬಿ. ಶೆಟ್ಟಿ, ವಾದಿರಾಜ್ ಶೆಟ್ಟಿ ಹೆಬ್ರಿ, ಹೆಗ್ಗುಂಜೆ ಪ್ರಮೋದ್ ಶೆಟ್ಟಿ, ಖಜಾಂಚಿ ಚೇರ್ಕಾಡಿ ರತ್ನಾಕರ ಶೆಟ್ಟಿ, ಕಾರ್ಯದರ್ಶಿಗಳಾದ ಪವನ್ ಶಿರಿಯಾರ, ರವಿಕಿರಣ್ ಡಿ'ಕೋಸ್ಟ್, ಉಮೇಶ್ ಶೆಟ್ಟಿ ಮುನಿಯಾಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article