ಕಸ್ತೂರಿರಂಗನ್ ವರದಿ ಬಗ್ಗೆ ಜನರ ಅಭಿಪ್ರಾಯ ಪಡೆದು ತೀರ್ಮಾನ: ಸಿಎಂ ಡಿಕೆಶಿ
ಕಸ್ತೂರಿರಂಗನ್ ವರದಿಯಿಂದ ಜನರಿಗೆ ಎದುರಾಗುವ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ವಾಸ್ತವ ಸ್ಥಿತಿಯನ್ನು ಅರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದಲೇ ಹೆಬ್ರಿಗೆ ಬಂದಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಹೆಬ್ರಿಯಲ್ಲಿ ನಡೆದ ಸಮಾವೇಶದಲ್ಲಿ ಸಾರ್ವಜನಿಕರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಅವರು, ಪ್ರಜಾಸೇವಕನಾಗಿ ಆಯ್ಕೆಯಾಗಿ ನೂರು ದಿನಗಳು ಕಳೆದಿವೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಮಾರು 60 ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 40 ತೀರ್ಮಾನಗಳು ನೇರವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅನುಕೂಲವಾಗಲಿವೆ ಎಂದರು.
ಕರಾವಳಿಗೆ ಸಂಬಂಧಿಸಿದಂತೆ ಮೂರು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ನಿಮ್ಮ ಮಾತೃಭಾಷೆ ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಘೋಷಿಸಿದ್ದೇವೆ. ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿದ್ದೇವೆ. ಬಂಡವಾಳ ಹೂಡಿಕೆ ಮೂಲಕ ಉದ್ಯೋಗ ಸೃಷ್ಟಿಸಿ ವಲಸೆ ತಪ್ಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕರಾವಳಿ ಪ್ರದೇಶ ಅರಣ್ಯ, ಸಮುದ್ರ, ಪರಿಸರ ಹಾಗೂ ಐತಿಹಾಸಿಕ ಹಿನ್ನೆಲೆಯಿಂದ ಕೂಡಿದ ಭೂಮಿಯಾಗಿದೆ. ಕೇರಳವನ್ನು ‘ಗಾಡ್ಸ್ ಓನ್ ಕಂಟ್ರಿ’ ಎಂದು ಕರೆಯುತ್ತಾರೆ. ಅದೇ ರೀತಿ ಕರಾವಳಿಯ ಜನರು ದೇವಮಾನವರಂತೆ ಬದುಕುತ್ತಿದ್ದಾರೆ. ತೀರ್ಥಯಾತ್ರೆ ಹಾಗೂ ಧಾರ್ಮಿಕ ಕಾರಣಗಳಿಗಾಗಿ ನಿಮ್ಮ ಜಿಲ್ಲೆಗೆ ಬಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದರು.
ಹೆಣ್ಣುಮಕ್ಕಳು ಉಚಿತವಾಗಿ ಈ ಭಾಗಕ್ಕೆ ಬಂದು ದೇವಸ್ಥಾನಗಳಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದೇವೆ. ಕರಾವಳಿ ದೇಶದ ಬ್ಯಾಂಕಿಂಗ್ ಕ್ಷೇತ್ರದ ತವರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯರು ಹಾಗೂ ವಿದ್ಯಾವಂತರು ರೂಪುಗೊಳ್ಳುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಣಕಾಸು ವಹಿವಾಟು ಹಾಗೂ ಧಾರ್ಮಿಕ ವಿಚಾರಗಳಿಗೂ ಆದ್ಯತೆ ಇದೆ ಎಂದು ಹೇಳಿದರು.
ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದೀರಿ. ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಕೋಟಿ ನಮಸ್ಕಾರಗಳು. ‘ದೇವರು ವರ-ಶಾಪ ಕೊಡುವುದಿಲ್ಲ, ಅವಕಾಶ ಮಾತ್ರ ನೀಡುತ್ತಾನೆ’ ಎಂಬ ಮಾತಿನಂತೆ ನನಗೆ ಸಿಕ್ಕ ಅವಕಾಶವನ್ನು ಜನರ ಸೇವೆಗೆ ಬಳಸಿಕೊಳ್ಳುತ್ತೇನೆ ಎಂದರು.
ಕಸ್ತೂರಿರಂಗನ್ ವರದಿ ಕುರಿತು ವಿಧಾನಸೌಧದಲ್ಲಿ ಕುಳಿತು ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಸತ್ಯ, ವಾಸ್ತವತೆ ಹಾಗೂ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ನಿಮ್ಮ ಬಳಿಗೆ ಬಂದಿದ್ದೇನೆ. ಜನರ ನೋವನ್ನು ಅರ್ಥಮಾಡಿಕೊಂಡಾಗ ಮಾತ್ರ ಸರಿಯಾದ ತೀರ್ಮಾನ ಕೈಗೊಳ್ಳಲು ಸಾಧ್ಯ. ನಿಮ್ಮ ಪ್ರತಿನಿಧಿಗಳು ನಿಮ್ಮ ಪರವಾಗಿ ಮಾತನಾಡಿದ್ದು, ಸಮಸ್ಯೆಗಳನ್ನು ಅರ್ಥಗರ್ಭಿತವಾಗಿ ವಿವರಿಸಿದ್ದಾರೆ ಎಂದರು.
ನಾನು ಹೊಸದಾಗಿ ‘ಪ್ರಜಾಸೇವಾ’ ವಿಭಾಗವನ್ನು ಆರಂಭಿಸಿದ್ದೇನೆ. ವಿಧಾನಸೌಧಕ್ಕೆ ಬರಲು ಸಾಧ್ಯವಾಗದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಕಸ್ತೂರಿರಂಗನ್ ವರದಿ ಕುರಿತು ನೀವು ಹಲವು ಸಮಸ್ಯೆಗಳನ್ನು ತಿಳಿಸಿ ಮನವರಿಕೆ ಮಾಡಿದ್ದೀರಿ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಸೆ.27ರೊಳಗೆ ನನ್ನ ಅಭಿಪ್ರಾಯವನ್ನು ತಿಳಿಸಬೇಕಾಗಿದೆ. ಆದರೆ ಇದು ಕೇವಲ ನನ್ನೊಬ್ಬನ ಅಭಿಪ್ರಾಯವಾಗಬಾರದು. ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ವರದಿ ಕುರಿತು ತಜ್ಞರ ಸಮಿತಿ ರಚಿಸಬೇಕು, ಕೇರಳ ಮಾದರಿಯನ್ನು ಪರಿಗಣಿಸಬೇಕು ಎಂಬ ಸಲಹೆಗಳು ಬಂದಿವೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರತ್ಯೇಕವಾಗಿ ಚರ್ಚಿಸಲಾಗುವುದು. ಅಗತ್ಯವಿದ್ದರೆ ವಿಶೇಷ ಅಧಿವೇಶನದಲ್ಲಿಯೂ ಚರ್ಚಿಸಲಾಗುವುದು. ಅಧಿವೇಶನದ ಮೊದಲ ದಿನವೇ ಈ ಬಗ್ಗೆ ಚರ್ಚೆ ನಡೆಸಿ, ಬೆಳಗ್ಗಿನಿಂದ ಎಷ್ಟು ಹೊತ್ತಾದರೂ ಚರ್ಚಿಸಲು ಸಿದ್ಧರಿದ್ದೇವೆ ಎಂದರು.
ಪ್ರತ್ಯೇಕವಾಗಿ ಸರ್ವೇ ನಡೆಸಬೇಕು ಎಂಬ ಮನವಿಯನ್ನೂ ಮಾಡಿದ್ದೀರಿ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡುತ್ತೇನೆ. ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರ ಅಭಿಪ್ರಾಯ ಮತ್ತು ಭಾವನೆಗಳನ್ನು ಆಲಿಸುತ್ತೇನೆ ಎಂದು ತಿಳಿಸಿದರು.
ಅರಣ್ಯ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ತೊಂದರೆ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಗರ್‌ಹುಕುಂ ಸಾಗುವಳಿ ಹಾಗೂ ಭೂ ಮಸೂದೆ ತಂದವರು ನಾವೇ. ಅಕ್ರಮ-ಸಕ್ರಮ ಹಾಗೂ ಇಕೋ ಸೆನ್ಸಿಟಿವ್ ವಲಯದ ವಿಚಾರಗಳ ಬಗ್ಗೆ ನನಗೆ ಅರಿವಿದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆಯೂ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದರು.
ಗ್ರಾಮಸಭೆ ನಡೆಸಬೇಕು, ಸರ್ವೇ ಮಾಡಬೇಕು ಹಾಗೂ ಜೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ಬಗ್ಗೆ ಗಮನ ಹರಿಸಬೇಕು ಎಂಬ ಸಲಹೆಗಳನ್ನು ನೀಡಿದ್ದೀರಿ. ಹೆಬ್ರಿಗೆ ತಾಲೂಕು ಆಸ್ಪತ್ರೆಯ ಅಗತ್ಯವಿದೆ ಎಂಬ ಮನವಿಯನ್ನೂ ಮಾಡಲಾಗಿದೆ. ಸಿಕ್ಕ ಅವಕಾಶದಲ್ಲಿ ನಿಮಗೆ ಸಹಾಯ ಮಾಡುತ್ತೇನೆ. ಸುಮ್ಮನೆ ಘೋಷಣೆ ಮಾಡುವುದು ಮುಖ್ಯವಲ್ಲ; ಸಹಿ ಹಾಕಿದ ಬಳಿಕ ಅದು ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದರು.
ನಾನು ಇಲ್ಲಿಗೆ ಬಂದಿರುವುದು ನಿಮ್ಮ ಕಷ್ಟಗಳನ್ನು ಕೇಳಲು. ಮುಂದಿನ ದಿನಗಳಲ್ಲಿ ಉಡುಪಿಗೆ ಬಂದು ಅಲ್ಲಿನ ಸಮಸ್ಯೆಗಳನ್ನೂ ಆಲಿಸುತ್ತೇನೆ. ಉಡುಪಿಯ ಶಾಸಕರು ಹಾಗೂ ಜನಪ್ರತಿನಿಧಿಗಳ ಭಾವನೆಗಳನ್ನು ಕೇಳುತ್ತೇನೆ. ವಿಧಾನಸಭೆಯಲ್ಲಿಯೂ ನಿಮ್ಮ ಪ್ರತಿನಿಧಿಗಳ ಮಾತುಗಳನ್ನು ಆಲಿಸಿ, ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ.
ಕರಾವಳಿಯ ಸಾಂಸ್ಕೃತಿಕ ಕಲೆಗಳು ಮತ್ತು ತುಳುನಾಡಿನ ಜನರು ದೇಶದ ದೊಡ್ಡ ಆಸ್ತಿ. ನಿಮ್ಮೆಲ್ಲರ ಬದುಕು ನಮಗೆ ಮುಖ್ಯ. ಭಾವನೆಗಳ ಮೇಲೆ ನಮ್ಮ ರಾಜಕಾರಣವಿಲ್ಲ; ಬದುಕಿನ ಮೇಲೆ ನಮ್ಮ ರಾಜಕಾರಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.