ಅ.2: 10ನೇ ಬ್ಯಾಚ್‌ನ 12 ವಾರಗಳ ಲೇ-ಕೌನ್ಸೆಲರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ 'ಒನ್ ಗುಡ್ ಸ್ಟೆಪ್' ಇವರ ಆಶ್ರಯದಲ್ಲಿ 12 ವಾರಗಳ ಲೇ-ಕೌನ್ಸೆಲರ್ ತರಬೇತಿ ಕಾರ್ಯಕ್ರಮವನ್ನು ಪ್ರತಿ ಭಾನುವಾರ ನಡೆಸಲಾಗುತ್ತಿದ್ದು, 10ನೇ ಬ್ಯಾಚ್‌ನ ತರಬೇತಿ ಕಾರ್ಯಕ್ರಮವು ಅಕ್ಟೋಬರ್ 2ರಿಂದ ಆರಂಭಗೊಳ್ಳಲಿದೆ ಎಂದು ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ ಭಂಡಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿಯ ಸಿಟಿ ಬಸ್ ನಿಲ್ದಾಣದ ಹತ್ತಿರವಿರುವ ಸದಾನಂದ ಟವರ್ ಮೊದಲನೇ ಮಹಡಿಯಲ್ಲಿರುವ ಮಾನಸ ಕ್ಲಿನಿಕ್ (ಮಾನಸ ಸೆಂಟರ್) ನಲ್ಲಿ ಹನ್ನೆರಡು ವಾರಗಳ ಕಾಲ ಪ್ರತೀ ಭಾನುವಾರ ಬೆಳಗ್ಗೆ 9.30ಯಿಂದ ಮಧ್ಯಾಹ್ನ 1.30 ವರೆಗೆ ನಡೆಯಲಿದೆ. ಈಗಾಗಲೇ ಹದಿನೈದು ಜನ ಹೆಸರು ನೋಂದಾಯಿಸಿಕೊಂಡಿದ್ದು, ಒಟ್ಟು ಇಪ್ಪತ್ತೈದು ಜನರಿಗೆ ಅವಕಾಶವಿದೆ ಎಂದರು.
ತರಬೇತಿಗೆ ಸೇರಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅಥವಾ ಮಾನಸಿಕ ಆರೋಗ್ಯ ಕ್ಷೇತ್ರದ ಪೂರ್ವಜ್ಞಾನ ಅಗತ್ಯವಿಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಮತ್ತು ಆಸಕ್ತಿ ಹೊಂದಿರುವವರು ತರಬೇತಿಗೆ ನೋಂದಾಯಿಸಿಕೊಳ್ಳಬಹುದು. ಆಸಕ್ತರು ತಮ್ಮ ಬಿಡುವಿನ ಸಮಯವನ್ನು ಮೀಸಲಿಟ್ಟು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಕೆ. ಶೆಟ್ಟಿ ಹಾಗೂ 'ಒನ್ ಗುಡ್ ಸೈಪ್' ನ ಅಮಿತಾ ಪೈ (9538886291/9986411788) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಅಕ್ಟೋಬರ್ 2ರಂದು ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆಡಳಿತಾತ್ಮಕ ವಿಮಾ ವೈದ್ಯಾಧಿಕಾರಿ ಹಾಗೂ ಮಂಗಳೂರಿನ ESI ಆಸ್ಪತ್ರೆ ಸಬಲೀಕರಣದ ನೋಡಲ್ ಅಧಿಕಾರಿ ಡಾ. ಹೆಮಂತ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಶಿಕಲಾ ರಾಜವರ್ಮ, ರೋಟರಿ ಮಣಿಪಾಲ, ನಿಮ್ಮತ್ತ ಮುಖ್ಯೋಪಾಧ್ಯಾಯನಿ ಮಾಧವ ಕೃಪ ಶಾಲೆ ಮಣಿಪಾಲ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈಗಾಗಲೇ ತರಬೇತಿ ಪಡೆದಿರುವ ಎಲ್ಲಾ ಒಂಬತ್ತು ಬ್ಯಾಚ್‌ಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಇಲ್ಲಿಯವರೆಗೆ ಹಲವು ಶಿಕ್ಷಕರು, ವಕೀಲರು, ಬ್ಯಾಂಕ್ ಉದ್ಯೋಗಿಗಳು, ಗೃಹಿಣಿಯರು, ನಿವೃತ್ತ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹೀಗೆ ವಿವಿಧ ಸ್ತರದ ಜನರು ಭಾಗವಹಿಸಿರುವುದು ನಮ್ಮ ತರಬೇತಿಯ ವಿಶೇಷತೆಯಾಗಿದೆ. ಈ ಸಂದರ್ಭದಲ್ಲಿ ಆಳ್ವಾಸ್ ಸೆಂಟರ್ ಫಾರ್ ವೆಲ್‌ನೆಸ್ ಟ್ರೈನಿಂಗ್‌ನ ನಿರ್ದೇಶಕಿ ಹಾಗೂ ಆಳ್ವಾಸ್ ಕಾಲೇಜು, ಮೂಡುಬಿದಿರೆಯ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಕೊಠರಿ ಅವರು 'Mind Over Mobile' ಎಂಬ ವಿಷಯದ ಕುರಿತು ಮೊಬೈಲ್ ವ್ಯಸನದ ಬಗ್ಗೆ, ವಿಶೇಷ ಅರಿವು ಕಾರ್ಯಾಗಾರ ನಡೆಸಲಿದ್ದಾರೆ ಎಂದರು.
ಈ ಲೇ-ಕೌನ್ಸಲರ್ ತರಬೇತಿ ಕಾರ್ಯಕ್ರಮವನ್ನು 2023ರ ಅಕ್ಟೋಬರ್ 2ರಂದು ನಾಡಿನ ಖ್ಯಾ ಮನೋವೈದ್ಯ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಅವರು ಉದ್ಘಾಟಿಸಿದ್ದರ ಈಗಾಗಲೇ ಒಂಬತ್ತು ಬ್ಯಾಚ್‌ಗಳ ತರಬೇತಿ ಪೂರ್ಣಗೊಂಡಿದ್ದು, 200ಕ್ಕೂ ಹೆಚ್ಚು ಲೇ-ಕೌನ್ಸೆಲರ್-ತರಬೇತಿ ನಡೆದು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಕೆ. ಶೆಟ್ಟಿ, ಡಾ. ಮಾನಸ್, ರಾಘವೇಂದ್ರ ರಾವ್, ನಾಗರಾಜ್ ಹಾಗೂ ಅಲ್ಕಾ ಪೈ ಮೊದಲಾದವರು ಉಪಸ್ಥಿತರಿದ್ದರು.