-->
ಮುಂಬೈನಲ್ಲಿ ಶ್ರೀ ಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ

ಮುಂಬೈನಲ್ಲಿ ಶ್ರೀ ಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ


ಧರ್ಮ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಜೀವನಶೈಲಿಯನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಉಡುಪಿ ಶ್ರೀ ಪುತ್ತಿಗೆ ಮಠದ ವತಿಯಿಂದ ಆರಂಭಿಸಲಾದ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ ಮುಂಬೈ ಮಹಾನಗರದಲ್ಲಿ ಭಾನುವಾರ ವಿಧಿವತ್ತಾಗಿ ಉದ್ಘಾಟನೆಗೊಂಡಿತು.


ಉಡುಪಿ ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ವಿದ್ಯಾಪೀಠಗಳ ಉದ್ಘಾಟನೆ ನೆರವೇರಿತು.


ಯಾಂತ್ರಿಕ ಜೀವನಶೈಲಿಯ ಪರಿಣಾಮವಾಗಿ ಧರ್ಮ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಜೀವನ ಕ್ರಮಗಳು ನಿಧಾನವಾಗಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆಸ್ತಿಕ ಸಮಾಜದ ಮನೆ-ಮನಗಳಲ್ಲಿ ಧರ್ಮಚಿಂತನೆ ಮೂಡಿಸಿ, ಧಾರ್ಮಿಕ ಆಚರಣೆಗಳ ಅರ್ಥವನ್ನು ಅರಿತು ಅವುಗಳನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿದ್ಯಾಪೀಠಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪುತ್ತಿಗೆ ವಿದ್ಯಾಪೀಠವು ಇದೀಗ ಮುಂಬೈಗೂ ತನ್ನ ಕಾರ್ಯವನ್ನು ವಿಸ್ತರಿಸಿದೆ.

ಮಹಿಳಾ ವಿದ್ಯಾಪೀಠದಲ್ಲಿ ಮಹಿಳೆಯರಿಗೆ ದಾಸರ ಪದಗಳು, ಹರಿಕಥಾಮೃತಸಾರ ಸಂಪ್ರದಾಯದ ಹಾಡುಗಳು, ಭಜನೆ, ರಂಗವಲ್ಲಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ನೀಡಲಾಗುವುದು.

ಸಂಧ್ಯಾ ವಿದ್ಯಾಪೀಠದಲ್ಲಿ ವಿಪ್ರ ಪುರುಷರಿಗೆ ವೇದಾಧ್ಯಯನ, ಸಂಧ್ಯಾವಂದನೆ ಕಾರ್ಯಾಗಾರ, ದೇವಪೂಜಾ ಪದ್ಧತಿ, ಶ್ರೀಮದ್ಭಗವದ್ಗೀತೆ, ದಾಸರ ಪದಗಳು ಹಾಗೂ ಭಜನೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಕ್ರಮಬದ್ಧ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.

 ಆಶೀರ್ವಚನ ನೀಡಿದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು, “ಸನಾತನ ಧರ್ಮವು ಎಂದಿಗೂ ನಶಿಸುವುದಿಲ್ಲ. ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲ ಧರ್ಮನಿಷ್ಠೆ ಇದಕ್ಕೆ ಪ್ರಮುಖ ಕಾರಣ. ಈ ಧರ್ಮಪ್ರಜ್ಞೆಯನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಮಹಿಳಾ ವಿದ್ಯಾಪೀಠ ಆರಂಭಿಸಲಾಗಿದೆ. ಯಾಂತ್ರಿಕ ಜೀವನಶೈಲಿಯಲ್ಲಿ ತಮ್ಮತನವನ್ನೇ ಮರೆತು ಹೋಗುತ್ತಿರುವ ಪುರುಷರಲ್ಲಿ, ವಿಶೇಷವಾಗಿ ವಿಪ್ರ ಪುರುಷರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಸಂಧ್ಯಾ ವಿದ್ಯಾಪೀಠ ಸ್ಥಾಪಿಸಲಾಗಿದೆ. ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು,” ಎಂದರು.

ಈ ಸಂದರ್ಭದಲ್ಲಿ ಮಹಾಭಾರತ ತಾತ್ಪರ್ಯ ನಿರ್ಣಯದ ಶ್ಲೋಕವನ್ನು ಉಪದೇಶಿಸುವ ಮೂಲಕ ಶ್ರೀಪಾದಂಗಳವರು ವಿದ್ಯಾಪೀಠಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾನ್ ನಾಗರಹಳ್ಳಿ ಪ್ರಹ್ಲಾದಾಚಾರ್ಯರು, ಇಂತಹ ವಿದ್ಯಾಪೀಠಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ. ಹಿಂದೆ ದೇಶದಲ್ಲಿ ಲಕ್ಷಾಂತರ ಗುರುಕುಲಗಳು ಹಾಗೂ ವಿದ್ಯಾಪೀಠಗಳು ಇದ್ದರೂ ಇಂದು ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಶ್ರೀಪಾದಂಗಳವರ ಸಂಕಲ್ಪದಿಂದ ದೇಶದ ಗತವೈಭವ ಪುನಶ್ಚೇತನಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅತಿಥಿ ಮಾನ್ಯೂರು ಅನಂತಮೂರ್ತಿ ಅವರು ಭಾಗ್ಯನಗರದ ಶ್ರೀ ಗುರು ರಾಘವೇಂದ್ರ ಮಠದಿಂದ ತಂದ ರಾಯರ ಶೇಷವಸ್ತ್ರವನ್ನು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಸಮರ್ಪಿಸಿದರು.

Ads on article

Advertise in articles 1

advertising articles 2

Advertise under the article