ಸಾವನ್ ಓಟಕ್ಕೆ ಬೆಳ್ಳಿ ಕಿರೀಟ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತದ ಸಾವನ್ ಬರ್ವಾಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. 28 ವರ್ಷದ ಸಾವನ್ 2 ಗಂಟೆ 11 ನಿಮಿಷ 36 ಸೆಕೆಂಡ್‌ಗಳಲ್ಲಿ (2:11:36) ಓಟ ಪೂರ್ಣಗೊಳಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸ್ಪರ್ಧೆಯ ಕೊನೆಯ ಹಂತದವರೆಗೂ ತೀವ್ರ ಪೈಪೋಟಿ ನೀಡಿದ ಸಾವನ್, ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಜಪಾನ್‌ನ ಇಚಿಟಾಕಾ ಯಮಾಶಿತಾ 2:10:51 ಸಮಯದೊಂದಿಗೆ ಚಿನ್ನದ ಪದಕ ಗೆದ್ದರೆ, ಸಾವನ್ ದ್ವಿತೀಯ ಸ್ಥಾನ ಪಡೆದರು.
ಈ ಸಾಧನೆಯೊಂದಿಗೆ ಸಾವನ್ ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮತ್ತೊಮ್ಮೆ ಉತ್ತಮಪಡಿಸಿದ್ದಾರೆ. ಈ ಹಿಂದೆ 2:11:58ರ ರಾಷ್ಟ್ರೀಯ ದಾಖಲೆ ಹೊಂದಿದ್ದ ಅವರು ಇದೀಗ 2:11:36 ಸಮಯದೊಂದಿಗೆ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಏಷ್ಯನ್ ಗೇಮ್ಸ್ ಮ್ಯಾರಥಾನ್ ಇತಿಹಾಸದಲ್ಲಿ ಭಾರತಕ್ಕೆ ದೊರೆತ ನಾಲ್ಕನೇ ಪದಕ ಇದಾಗಿದೆ. 1982ರ ದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಹೊಸೂರು ಕುಕ್ಕಪ್ಪ ಸೀತಾರಾಮ್ ಕಂಚಿನ ಪದಕ ಗೆದ್ದ ಬಳಿಕ ಈ ವಿಭಾಗದಲ್ಲಿ ಭಾರತಕ್ಕೆ ಪದಕ ಲಭಿಸಿರಲಿಲ್ಲ. ಇದೀಗ 44 ವರ್ಷಗಳ ಬಳಿಕ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಸುದೀರ್ಘ ಪದಕದ ಬರವನ್ನು ನೀಗಿಸಿದ್ದಾರೆ.
1951ರಲ್ಲಿ ನಡೆದ ಮೊದಲ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಛೋಟಾ ಸಿಂಗ್ ಚಿನ್ನದ ಪದಕ ಹಾಗೂ ಸೂರತ್ ಸಿಂಗ್ ಮಾಥುರ್ ಕಂಚಿನ ಪದಕ ಗೆದ್ದಿದ್ದರು. ಇದೀಗ ಸಾವನ್ ಬರ್ವಾಲ್ ಬೆಳ್ಳಿ ಪದಕದೊಂದಿಗೆ ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಪದಕ ಗೆದ್ದ ಭಾರತೀಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರಡಾಭಂಕರ ಗ್ರಾಮದವರಾದ ಸಾವನ್ ಬರ್ವಾಲ್ ಭಾರತೀಯ ಸೇನೆಯ ಎಂಜಿನಿಯರಿಂಗ್ ಕಾರ್ಪ್ಸ್‌ನಲ್ಲಿ ಹವಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ದಾಖಲೆಯ ಓಟದ ಮೂಲಕ ದೇಶದ ಕೀರ್ತಿ ಹೆಚ್ಚಿಸಿರುವ ಅವರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.